ಕಾಶ್ಮೀರದಲ್ಲಿ ಭಾರೀ ಹಿಮಪಾತ: ಅತಂತ್ರರಾದ ಪ್ರವಾಸಿಗರಿಗೆ ಮಸೀದಿಯಲ್ಲಿ ಆಶ್ರಯ

Update: 2024-12-28 14:36 GMT

PC :X\ @MirwaizKashmir

ಶ್ರೀನಗರ: ಭಾರೀ ಹಿಮಪಾತದಿಂದಾಗಿ ಅತಂತ್ರರಾಗಿರುವ ಪ್ರವಾಸಿಗರಿಗೆ ಆಶ್ರಯ ನೀಡಲು ಶ್ರೀನಗರ-ಸೋನಾಮಾರ್ಗ್ ಹೆದ್ದಾರಿಯ ಗುಂಡ್‌ ಪ್ರದೇಶದಲ್ಲಿರುವ ಸ್ಥಳೀಯರು, ಮಸೀದಿಯ ಬಾಗಿಲು ತೆರೆದು ಮಾನವೀಯತೆ ಪ್ರದರ್ಶಿಸಿದ್ದಾರೆ.

ಪಂಜಾಬ್‌ನ ಸುಮಾರು 12 ಮಂದಿ ಪ್ರವಾಸಿಗರು ಶುಕ್ರವಾರ ಸೋನಾಮಾರ್ಗ್ ಪ್ರದೇಶದಿಂದ ಹಿಂದಿರುಗುತ್ತಿದ್ದಾಗ ಹಿಮಪಾತದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರ ವಾಹನಗಳು ಹಿಮದಲ್ಲಿ ಸಿಲುಕಿಕೊಂಡವು. ಹತ್ತಿರದ ಯಾವುದೇ ಹೋಟೆಲ್‌ಗಳು ಮತ್ತು ಸ್ಥಳೀಯ ಮನೆಗಳು ಪ್ರವಾಸಿಗರಿಗೆ ಆಶ್ರಯ ನೀಡಲು ತುಂಬಾ ಚಿಕ್ಕದಾದ್ದರಿಂದ ಗುಂಡ್ ನಿವಾಸಿಗಳು ಜಾಮಿಯಾ ಮಸೀದಿಯ ಬಾಗಿಲುಗಳನ್ನು ಅವರಿಗಾಗಿ ತೆರೆದರು. ಪ್ರವಾಸಿಗರಿಗೆ ರಾತ್ರಿ ಅಲ್ಲಿಯೇ ಉಳಿಯಲು ಅವಕಾಶ ಮಾಡಿಕೊಟ್ಟರು ಎಂದು ವರದಿಯಾಗಿದೆ.

"ಮಸೀದಿಯು ಹಮಾಮ್ ಅನ್ನು ಹೊಂದಿದೆ. ರಾತ್ರಿಯಿಡೀ ಬೆಚ್ಚಗಿರುತ್ತದೆ. ಪ್ರವಾಸಿಗರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ", ಎಂದು ಸ್ಥಳೀಯ ನಿವಾಸಿ ಬಶೀರ್ ಅಹ್ಮದ್ ಹೇಳಿದರು.

ಗುಂಡ್‌ನಲ್ಲಿರುವ ಜಾಮಿಯಾ ಮಸೀದಿಯು ಗಗಾಂಗೀರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸ್ಥಳದಿಂದ 10 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿದೆ. ಗಗಾಂಗೀರ್ ನಲ್ಲಿ ಈ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ವಲಸಿಗ ಕಾರ್ಮಿಕರು ಸೇರಿದಂತೆ ಸ್ಥಳೀಯ ವೈದ್ಯರೊಬ್ಬರು ಮೃತಪಟ್ಟಿದ್ದಾರೆ.

"ನಾವು ಹಿಮದಲ್ಲಿ ಸಿಲುಕಿಕೊಂಡಿದ್ದವು. ನೀವು ನಮ್ಮ ರಕ್ಷಣೆಗೆ ಬಂದಿದ್ದೀರಿ. ನಿಮ್ಮೆಲ್ಲರಿಗೂ ನಾವು ಅತ್ಯಂತ ಕೃತಜ್ಞರಾಗಿರುತ್ತೇವೆ" ಎಂದು ಸ್ಥಳೀಯರ ನೆರವಿಗಾಗಿ ಅತಂತ್ರರಾಗಿದ್ದ ಪ್ರವಾಸಿಗರು ಪೈಕಿ ಒಬ್ಬರು ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರವಾಸಿಗರು ಮಸೀದಿಯೊಳಗೆ ರಾತ್ರಿ ಕಳೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

"ಪ್ರತಿಯೊಬ್ಬರೂ ಕಾಶ್ಮೀರವನ್ನು ಮತ್ತು ಇಲ್ಲಿನ ಆತಿಥ್ಯವನ್ನು ಸವಿಯಲು ಭೇಟಿ ನೀಡಬೇಕು. ಇಲ್ಲಿ ಎಲ್ಲರೂ ಶಾಂತಿ ಸಹನೆಯಿಂದ ಇದ್ದಾರೆ. ಇದು ಸುರಕ್ಷಿತ ಪ್ರದೇಶ. ದಯವಿಟ್ಟು ಭೂಮಿಯ ಮೇಲಿನ ಈ ಸ್ವರ್ಗಕ್ಕೆ ಬನ್ನಿ."ಮತ್ತೊಬ್ಬ ಪ್ರವಾಸಿಗರು ಹೇಳಿದ್ದಾರೆ.

ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಪ್ರವಾಸಿಗರಿಗೆ ಆಶ್ರಯ ನೀಡಿರುವುದಕ್ಕೆ ಶ್ಲಾಘಿಸಿದ್ದಾರೆ. ಭಾರೀ ಹಿಮಪಾತದ ನಡುವೆ ಕಾಶ್ಮೀರಿಗಳು ತಮ್ಮ ಮಸೀದಿಗಳು ಮತ್ತು ಮನೆಗಳನ್ನು ಪ್ರವಾಸಿಗರಿಗೆ ತೆರೆದಿರುವುದನ್ನು ನೋಡಲು ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News