ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುವುದಾಗಿ ಮತ್ತೊಬ್ಬ ಬಿಜೆಪಿ ಅಭ್ಯರ್ಥಿಯ ಹೇಳಿಕೆ!

Update: 2024-04-02 17:32 GMT

ಜ್ಯೋತಿ ಮಿರ್ಧಾ | Photo: X \ @jyotimirdha

ನಾಗೌರ್‌ (ರಾಜಸ್ಥಾನ): “ದೇಶದ ಹಿತಾಸಕ್ತಿಯಿಂದ ಹಲವಾರು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದು, ಅದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಿದೆ. ನಾವು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಿದ್ದರೆ ಲೋಕಸಭೆ ಹಾಗೂ ರಾಜ್ಯಸಭೆಗಳೆರಡರಲ್ಲೂ ಬಹುಮತವಿರಬೇಕು ಎಂಬ ಸಂಗತಿ ನಿಮಗೆ ತಿಳಿದೇ ಇದೆ" ಎಂದು ಮಾರ್ಚ್ 30ರಂದು ರಾಜಸ್ಥಾನದ ನಾಗೌರ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜ್ಯೋತಿ ಮಿರ್ಧಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಮತ್ತೊಬ್ಬ ಬಿಜೆಪಿ ನಾಯಕಿಯ ಈ ಹೇಳಿಕೆಯಿಂದ ವಿರೋಧ ಪಕ್ಷಗಳಿಗೆ ಮತ್ತೊಂದು ಆಯುಧ ದೊರೆತಂತಾಗಿದ್ದು, ಬಿಜೆಪಿ ಹಿರಿಯ ನಾಯಕರ ಪ್ರಕಾರ, ಈ ಹೇಳಿಕೆಯು ಉದ್ದೇಶಪೂರ್ವಕ ಕಾರ್ಯತಂತ್ರದ ಭಾಗವಾಗಿದೆ ಎಂದು indianexpress.com ವರದಿ ಮಾಡಿದೆ.

ಮಿರ್ಧಾರ ಈ ವಿಡಿಯೊವನ್ನು ತನ್ನ ಅಧಿಕೃತ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, "ಇದು ರಾಜಸ್ಥಾನದ ನಾಗೌರ್‌ದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ. ಸಂವಿಧಾನವನ್ನು ಬದಲಿಸಲು ನಮಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಭಾರಿ ಬಹುಮತ ಬೇಕು ಎಂದು ಜ್ಯೋತಿ ಮಿರ್ಧಾ ಹೇಳಿದ್ದಾರೆ. ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕೂಡಾ ನಾವು ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಪಡೆದರೆ, ನಾವು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿದ್ದರು. ಈ ಹೇಳಿಕೆಗಳಿಂದ ಬಿಜೆಪಿ ಹಾಗೂ ಪ್ರಧಾನಿ ಮೋದಿ ಸಂವಿಧಾನ ಮತ್ತು ಪ್ರಜಾತಂತ್ರವನ್ನು ದ್ವೇಷಿಸುವುದು ಸ್ಪಷ್ಟವಾಗಿದೆ. ಬಾಬಾ ಸಾಹೇಬರು ನೀಡಿರುವ ಸಂವಿಧಾನವನ್ನು ರದ್ದುಗೊಳಿಸುವ ಮೂಲಕ ಜನರ ಹಕ್ಜನ್ನು ಕಸಿಯುವುದು ಬಿಜೆಪಿಯ ಬಯಕೆಯಾಗಿದೆ" ಎಂದು ವಾಗ್ದಾಳಿ ನಡೆಸಿದೆ.

ನಾಗೌರ್‌ ಲೋಕಸಭಾ ಕ್ಷೇತ್ರದಿಂದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲೋಕ್ ತಾಂತ್ರಿಕ್ ಪಕ್ಷದ ಮುಖ್ಯಸ್ಥ ಹನುಮಾನ್ ಬೇನಿವಾಲ್, ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡಾ ಜ್ಯೋತಿ ಮಿರ್ಧಾರ ಹೇಳಿಕೆಯನ್ನು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News