ಸೇನೆಯಲ್ಲಿ ಮೇಜರ್‌, ಕ್ಯಾಪ್ಟನ್‌ ಶ್ರೇಣಿಯ 6000 ಕ್ಕೂ ಅಧಿಕ ಅಧಿಕಾರಿಗಳ ಕೊರತೆ

Update: 2023-07-25 12:45 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಭಾರತೀಯ ಸೇನೆಯು ಮೇಜರ್‌ ಶ್ರೇಣಿಯ 2,094 ಅಧಿಕಾರಿಗಳು ಹಾಗೂ ಕ್ಯಾಪ್ಟನ್‌ ಶ್ರೇಣಿಯ 4,734 ಅಧಿಕಾರಿಗಳ ಕೊರತೆ ಎದುರಿಸುತ್ತಿದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಕೂಡ ವೈದ್ಯರು, ದಂತವೈದ್ಯರು ಮತ್ತು ದಾದಿಯರ ಕೊರತೆ ಎದುರಿಸುತ್ತಿದೆ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್‌ ಭಟ್ಟ್‌ ರಾಜ್ಯಸಭೆಯಲ್ಲಿ ಸಂಸದರಾದ ಕುಮಾರ್‌ ಕೇಟ್ಕರ್‌ ಮತ್ತು ಜೆಬಿ ಮಥೆರ್‌ ಹಿಶಮ್‌ ಅವರಿಗೆ ನೀಡಿದ ಪ್ರತ್ಯೇಕ ಉತ್ತರಗಳಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭ ರಕ್ಷಣಾ ಪಡೆಗಳಿಗೆ ಹೆಚ್ಚು ನೇಮಕಾತಿ ಮಾಡದೇ ಇರುವುದರಿಂದ ಈ ಕೊರತೆ ಉಂಟಾಗಿರಬಹುದು ಎಂದು ಸಚಿವರು ಹೇಳಿದ್ದಾರೆ. ಕೊರತೆಯನ್ನು ನೀಗಿಸಲು ಹೆಚ್ಚು ಜನರನ್ನು ಆಕರ್ಷಿಸಬಹುದಾದ ಶಾರ್ಟ್‌ ಸರ್ವಿಸ್‌ ಎಂಟ್ರಿ ಪ್ರಸ್ತಾವನೆಯಿದೆ ಎಂದು ಅವರು ಹೇಳಿದರು.

ಮೂರೂ ರಕ್ಷಣಾ ಪಡೆಗಳಲ್ಲಿ 630 ವೈದ್ಯರು, 73 ದಂತವೈದ್ಯರು ಮತ್ತು 701 ದಾದಿಯರ ಕೊರತೆಯಿದೆ. ಗರಿಷ್ಠ ಕೊರತೆ ಸೇನೆಯಲ್ಲಿದ್ದು ಸೇನೆಯಲ್ಲಿ 598 ವೈದ್ಯರು, 56 ದಂತವೈದ್ಯರು ಮತ್ತು 528 ದಾದಿಯರ ಕೊರತೆಯಿದೆ.

ನೌಕಾಪಡೆಯಲ್ಲಿ 20 ವೈದ್ಯರು, 11 ದಂತವೈದ್ಯರು ಮತು 86 ದಾದಿಯರ ಕೊರತೆಯಿದ್ದರೆ ವಾಯುಪಡೆಯಲ್ಲಿ 12 ವೈದ್ಯರು, ಆರು ದಂತವೈದ್ಯರು ಮತ್ತು 87 ದಾದಿಯರ ಕೊರತೆಯಿದೆ.

ಸೇನೆಯಲ್ಲಿ 1495 ಅರೆವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದರೆ ನೌಕಾಪಡೆಯಲ್ಲಿ 392 ಅರೆವೈದ್ಯಕೀಯ ಸಿಬ್ಬಂದಿ ಮತ್ತು ವಾಯುಪಡೆಯಲ್ಲಿ 73 ಅರೆವೈದ್ಯಕೀಯ ಸಿಬ್ಬಂದಿ ಕೊರತೆಯಿದೆ. ಇವುಗಳನ್ನು ಶೀಘ್ರ ತುಂಬಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News