ಬಂಧನ ಪ್ರಶ್ನಿಸಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅಪೀಲನ್ನು ವಜಾಗೊಳಿಸಿದ ದಿಲ್ಲಿ ಹೈಕೋರ್ಟ್‌

Update: 2024-04-09 10:42 GMT

ಅರವಿಂದ್‌ ಕೇಜ್ರಿವಾಲ್

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ(ಈಡಿ)ವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕಾಂತ ಶರ್ಮ ಅವರ ಪೀಠ ಕೇಜ್ರಿವಾಲ್‌ ಅವರ ಅರ್ಜಿಯನ್ನು ವಜಾಗೊಳಿಸಿದೆ.

ಕೇಜ್ರಿವಾಲ್‌ ಅವರ ಬಂಧನವು ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸಂಬಂಧಿತ ಸೆಕ್ಷನ್‌ನ ಉಲ್ಲಂಘನೆಯಾಗುವುದಿಲ್ಲ. ಅವರ ಬಂಧನವನ್ನು ಅಕ್ರಮವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ.

ಮುಖ್ಯಮಂತ್ರಿಯೊಬ್ಬರಿಗೆ ವಿಶೇಷ ಸವಲತ್ತಿಲ್ಲ. ಈ ನ್ಯಾಯಾಲಯವು ಸಮಾನ್ಯ ನಾಗರಿಕನಿಗೊಂದು ನ್ಯಾಯ ಮತ್ತು ಮುಖ್ಯಮಂತ್ರಿಯೊಬ್ಬರಿಗೆ ವಿಶೇಷ ಸವಲತ್ತು ಒದಗಿಸಲು ಇನ್ನೊಂದು ನ್ಯಾಯ ಹೊಂದಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಜಾರಿ ನಿರ್ದೇಶನಾಲಯವು ಸಂಗ್ರಹಿಸಿದ ಸಾಕ್ಷ್ಯದಿಂದ ಕೇಜ್ರಿವಾಲ್‌ ಈ ಅಬಕಾರಿ ನೀತಿ ರಚನೆಯಲ್ಲಿ ಶಾಮೀಲಾಗಿದ್ದರು ಮತ್ತು ಅದರಿಂದ ದೊರೆತ ಲಾಭವನ್ನು ಬಳಸಿಕೊಂಡಿದ್ದಾರೆಂದು ತಿಳಿದು ಬರುತ್ತದೆ. ಈ ನೀತಿಯ ಮೂಲಕ ಲಂಚದ ಬೇಡಿಕೆಯನ್ನು ವೈಯಕ್ತಿಕ ಆಧಾರದಲ್ಲಿ ಹಾಗೂ ಆಪ್‌ ರಾಷ್ಟ್ರೀಯ ವಕ್ತಾರನೆಂಬ ಆಧಾರದಲ್ಲಿ ಇರಿಸಿದ್ದರು ಎಂಬುದು ತಿಳಿದು ಬರುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

ಎಪ್ರಿಲ್‌ 3ರಂದು ನಡೆದ ಹೈಕೋರ್ಟ್‌ ವಿಚಾರಣೆ ವೇಳೆ ಕೇಜ್ರಿವಾಲ್‌ ತಮ್ಮ ಬಂಧನದ ಸಮಯವನ್ನು ಪ್ರಶ್ನಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲೆವೆಲ್‌ ಪ್ಲೇಯಿಂಗ್‌ ಫೀಲ್ಡ್‌ ಅನ್ನು ಬಾಧಿಸಿರುವುದರಿಂದ ತಮ್ಮ ಬಂಧನವು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಕೇಜ್ರಿವಾಲ್‌ ವಾದಿಸಿದ್ದರು.

ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್‌ ಪ್ರಮುಖ ಆರೋಪಿ ಎಂದು ಇಡಿ ಈಗಾಗಲೇ ಹೇಳಿದ್ದು ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತಲ್ಲದೆ ಅವರಿಗೆ ಮತ್ತು ಸಾಮಾನ್ಯ ನಾಗರಿಕನಿಗೆ ನ್ಯಾಯ ಒಂದೇ ರೀತಿ ಅನ್ವಯಿಸುತ್ತದೆ ಎಂದು ಹೇಳಿತ್ತು.

“ನೀವು ಮುಖ್ಯಮಂತ್ರಿ ಎಂಬ ಕಾರಣಕ್ಕೆ ನಿಮ್ಮನ್ನು ಬಂಧಿಸಬಾರದೇ? ನೀವು ದೇಶವನ್ನು ಲೂಟಿಗೈಯ್ಯುತ್ತೀರಿ. ಆದರೆ ಚುನಾವಣೆ ಹತ್ತಿರ ಬರುತ್ತಿದೆ ಎಂಬ ಎಂಬ ಕಾರಣಕ್ಕೆ ನಿಮ್ಮನ್ನು ಬಂಧಿಸಬಾರದೇ? ನಿಮ್ಮ ಬಂಧನ ಮೂಲಭೂತ ಆಶಯಕ್ಕೆ ವಿರುದ್ಧ ಎನ್ನುತ್ತೀರಿ. ಯಾವ ಮೂಲಭೂತ ಆಶಯವಿದು?” ಎಂದು ಈಡಿ ಪ್ರಶ್ನಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News