ಅಸ್ಸಾಂ | ಮುಖ್ಯಮಂತ್ರಿ ಎದುರಿಗೇ ಸಚಿವರನ್ನು ತರಾಟೆಗೆ ತೆಗೆದುಕೊಂಡ ಅಸ್ಸಾಂ ಬಿಜೆಪಿ ಮುಖ್ಯಸ್ಥ; ವಿಡಿಯೊ ವೈರಲ್

Update: 2025-04-16 13:44 IST
ಅಸ್ಸಾಂ | ಮುಖ್ಯಮಂತ್ರಿ ಎದುರಿಗೇ ಸಚಿವರನ್ನು ತರಾಟೆಗೆ ತೆಗೆದುಕೊಂಡ ಅಸ್ಸಾಂ ಬಿಜೆಪಿ ಮುಖ್ಯಸ್ಥ; ವಿಡಿಯೊ ವೈರಲ್

Photo credit: nenow.in

  • whatsapp icon

ಗುವಾಹಟಿ: ಅಸ್ಸಾಂ ಬಿಜೆಪಿ ಮುಖ್ಯಸ್ಥ ದಿಲೀಪ್ ಸೈಕಿಯಾ ಅವರು ರಾಜ್ಯ ಸಚಿವ ಜಯಂತ ಮಲ್ಲ ಬರುವಾರನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮರೆದುರಿಗೇ ನಿಂದಿಸಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಬೆನ್ನಿಗೇ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದ್ದು, ವಿರೋಧ ಪಕ್ಷಗಳು ಈ ಘಟನೆಯನ್ನು ತೀಕ್ಷ್ಣವಾಗಿ ಟೀಕಿಸಿದೆ.

ರವಿವಾರ ಅಸ್ಸಾಂನ ನಲ್ಬರಿ ಜಿಲ್ಲೆಯ ಬಹ್ಜನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಬಿಜೆಪಿ ಮಂಡಲ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ, ನೂತನವಾಗಿ ಉದ್ಘಾಟನೆಗೊಂಡ ಕಚೇರಿಯ ಕಟ್ಟಡದೊಳಗೆ ಅದಾಗಲೇ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹಾಗೂ ಸ್ಥಳೀಯ ಶಾಸಕರೂ ಆದ ಜಯಂತ ಮಲ್ಲ ಬರುವಾ ಇದ್ದರೂ, ಕಚೇರಿಯ ಕಟ್ಟಡದೊಳಗೆ ಪ್ರವೇಶಿಸಲು ಅಸ್ಸಾಂ ಬಿಜೆಪಿ ಮುಖ್ಯಸ್ಥ ದಿಲೀಪ್ ಸೈಕಿಯಾರಿಗೆ ಮೊದಲಿಗೆ ಅವಕಾಶ ನಿರಾಕರಿಸಲಾಯಿತು ಎನ್ನಲಾಗಿದೆ.

ಸದ್ಯ ವೈರಲ್ ಆಗಿರುವ ಈ ಘಟನೆಯ ವಿಡಿಯೊದಲ್ಲಿ ದಿಲೀಪ್ ಸೈಕಿಯಾ, ಸಚಿವ ಜಯಂತ್ ಮಲ್ಲ ಬರುವಾರನ್ನು ನಿಂದಿಸುತ್ತಿರುವುದು ಹಾಗೂ ಕಚೇರಿಯ ಆವರಣದಿಂದ ಮಂಡಲಾಧ್ಯಕ್ಷರನ್ನು ಹೊರ ದೂಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸುತ್ತಿರುವುದು ಸೆರೆಯಾಗಿದೆ. ಈ ಘಟನೆಯಲ್ಲಿ ನಡೆದ ಮಾತಿನ ಚಕಮಕಿಯ ಧ್ವನಿಮುದ್ರಣ ಅಸ್ಪಷ್ಟವಾಗಿದ್ದರೂ, "ನಿಮ್ಮ ಕ್ಷೇತ್ರ.. ಹಿಮಂತ ಹಾಗೂ ಇನ್ನಿತರೆದುರಿಗೇ ಅಧ್ಯಕ್ಷರಿಗೆ ಅಗೌರವ" ಎಂದು ದಿಲೀಪ್ ಸೈಕಿಯಾ ಏರಿದ ಧ್ವನಿಯಲ್ಲಿ ಸಚಿವ ಜಯಂತ್ ಮಲ್ಲ ಬರುವಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ಕೇಳಬಹುದಾಗಿದೆ. ಈ ಮಾತಿನ ಚಕಮಕಿಯ ಬೆನ್ನಿಗೇ, ನೂತನ ಕಚೇರಿಯ ಸಂಕೀರ್ಣದಲ್ಲಿದ್ದ ಕೋಣೆಯೊಂದಕ್ಕೆ ಮೌನವಾಗಿ ತೆರಳಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹಾಗೂ ಮತ್ತಿತರರು, ದಿಲೀಪ್ ಸೈಕಿಯಾ ಹಾಗೂ ಜಯಂತ್ ಮಲ್ಲ ಬರುವಾ ನಡುವಿನ ವಾಕ್ಸಮರದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕರೊಬ್ಬರು, ಸದರಿ ಕಾರ್ಯಕ್ರಮವು ಸಂಪೂರ್ಣವಾಗಿ ಪಕ್ಷದ ಕಾರ್ಯಕ್ರಮವಾಗಿತ್ತೇ ಹೊರತು, ಸರಕಾರಿ ಕಾರ್ಯಕ್ರಮವಲ್ಲ. ಪಕ್ಷದ ರಾಜ್ಯಾಧ್ಯಕ್ಷರಿಗೆ ಸೂಕ್ತ ಪ್ರಾಮುಖ್ಯತೆಯನ್ನು ನೀಡಲೇಬೇಕಿತ್ತು. ಈ ಘಟನೆಯಿಂದ ಅವರು ಮುಜುಗರಕ್ಕೊಳಗಾದಂತೆ ಕಂಡು ಬಂದಿದ್ದು, ಹೀಗಾಗಿ, ಮಾತಿನ ಸಂಘರ್ಷ ನಡೆದಿದೆ" ಎಂದು ಹೇಳಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ, "ಈ ಘಟನೆಯು ಸಂಘಿ ಸರಕಾರ ಹಾಗೂ ಸಿಂಡಿಕೇಟ್ ಸರಕಾರದ ನಡುವಿನ ಬಿಕ್ಕಟ್ಟಾಗಿದೆ" ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಬೋರಾ, "ರಾಮ್ ರಾಮ್, ಪ್ರಥಮ ಬೊಹಾಗ್ ದಿನದಂದೇ ಬಂಡಾಯ. ನನಗೆ ಈ ಸಂಗತಿ ಮೊದಲಿನಿಂದಲೂ ತಿಳಿದಿತ್ತು. ಅಸ್ಸಾಂ ಬಿಜೆಪಿಯಲ್ಲಿ ಸಿಂಡಿಕೇಟ್ ರಾಜರು ಆರೆಸ್ಸೆಸ್ ನಿಷ್ಠರಿಂದ ಪ್ರತಿ ಹೋರಾಟವನ್ನು ಎದುರಿಸುತ್ತಿದ್ದಾರೆ" ಎಂದು ಛೇಡಿಸಿದ್ದಾರೆ.

ಈ ಘಟನೆಯು ವಿವಾದದ ಸ್ವರೂಪಕ್ಕೆ ತಿರುಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದಿಲೀಪ್ ಸೈಕಿಯಾ, ತನ್ನ ಹಾಗೂ ಸಚಿವ ಜಯಂತ ಮಲ್ಲ ಬರುವಾ ನಡುವಿನ ಘರ್ಷಣೆಯನ್ನು ನೇರವಾಗಿ ಉಲ್ಲೇಖಿಸದೆ, ಅಂದಿನ ಕಾರ್ಯಕ್ರಮದ ಮಹತ್ವದ ಕುರಿತು ಪ್ರಸ್ತಾಪಿಸಿದ್ದಾರೆ. "ಕಾರ್ಯಕರ್ತರು ಹಾಗೂ ಕಚೇರಿಗಳು ಪಕ್ಷದ ಬೆನ್ನೆಲುಬಾಗಿದ್ದು, ಈ ನೂತನ ಕಟ್ಟಡವು ಜನರಿಗೆ ಮತ್ತಷ್ಟು ಅರ್ಪಣಾ ಮನೋಭಾವ ಹಾಗೂ ಸಮನ್ವಯದೊಂದಿಗೆ ಸೇವೆ ಸಲ್ಲಿಸಲು ಪಕ್ಷದ ಕಾರ್ಯಕರ್ತರನ್ನು ಮತ್ತಷ್ಟು ಸಬಲೀಕರಣಗೊಳಿಸಲಿದೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News