ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಹತ್ಯೆ ಪ್ರಕರಣ; ವಜಾಗೊಂಡಿದ್ದ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

PC: x.com/News18lokmat
ಮುಂಬೈ: ಸಹೋದ್ಯೋಗಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಿನಿ ಬಿದ್ರೆ-ಗೋರೆ ಅವರನ್ನು ಹತ್ಯೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ಆರೋಪದಲ್ಲಿ ವಜಾಗೊಂಡಿರುವ ಪೊಲೀಸ್ ಅಧಿಕಾರಿ ಅಭಯ್ ಕುರುಂಡ್ಕರ್ ಗೆ ಜೀವಾವಧಿ ಶಿಕ್ಷೆ ನೀಡಿ ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ. ಎರಡು ವಾರ ಮೊದಲು ಅಧಿಕಾರಿಯನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿತ್ತು.
ಎಪಿಐ ಬಿದ್ರೆ ಜೊತೆ ಪ್ರೇಮಸಂಬಂಧ ಹೊಂದಿದ್ದ ಕುರುಂಡ್ಕರ್, ವ್ಯಾಜ್ಯವೊಂದರ ಸಂಬಂಧ 2016ರ ಏಪ್ರಿಲ್ ನಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ. ಮೃತದೇಹ ಪತ್ತೆಯಾಗಿರಲೇ ಇಲ್ಲ. ಆದರೆ ಮೃತದೇಹ ಪತ್ತೆಯಾಗಿಲ್ಲ ಎನ್ನುವುದು ಅಪರಾಧಿಗಳನ್ನು ಬಚಾವ್ ಮಾಡಲು ಕಾರಣವಾಗುವುದಿಲ್ಲ ಎಂದು ಪನ್ವೇಲ್ ಸೆಷನ್ಸ್ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂತೆಯೇ ಅಭಿಯೋಜಕರ ವಾದದಂತೆ ಮರಣ ದಂಡನೆ ವಿಧಿಸಬೇಕಾದ ಅತ್ಯಪೂರ್ವ ಪ್ರಕರಣವೇನೂ ಅಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ತನಿಖೆಯಲ್ಲಿ ನವಿ ಮುಂಬೈ ಪೊಲೀಸರು ಪ್ರಾಮಾಣಿಕ ಕ್ರಮ ಕೈಗೊಂಡಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಜಿ.ಪಲ್ದೇವಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಇಡೀ ವ್ಯವಸ್ಥೆ ಕುರುಂಡ್ಕರ್ ಅವರ ಪರವಾಗಿ ನಿಂತಿದೆ ಎಂದು ಆಕ್ಷೇಪಿಸಿದರು. ತನಿಖಾ ದೋಷಗಳ ಬಗ್ಗೆ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಕೃತ್ಯಕ್ಕೆ ನೆರವಾದ ಆರೋಪದಲ್ಲಿ ಚಾಲಕ ಕುಂದನ್ ಭಂಡಾರಿ ಮತ್ತು ಸ್ನೇಹಿತ ಮಹೇಶ್ ಫಳ್ನೀಕರ್ ಅವರಿಗೆ ತಲಾ 7 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.