ಬಿಹಾರ: ಗುಂಡಿಕ್ಕಿ ಪತ್ರಕರ್ತನ ಹತ್ಯೆ

Update: 2023-08-18 08:29 GMT

Photo: NDTV 

ಪಾಟ್ನಾ: ಇಂದು ಮುಂಜಾನೆ ದುಷ್ಕರ್ಮಿಗಳು ಪತ್ರಕರ್ತರೊಬ್ಬರ ಮನೆಗೆ ನುಗ್ಗಿ ಅವರಿಗೆ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ಬಿಹಾರದ ಅರಾರಿಯ ಜಿಲ್ಲೆಯಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.

ಹತ್ಯೆಗೀಡಾದ ಪತ್ರಕರ್ತರನ್ನು ಬಿಮಲ್ ಯಾದವ್ ಎಂದು ಗುರುತಿಸಲಾಗಿದ್ದು, ಅವರು ‘ದೈನಿಕ್ ಜಾಗರಣ್’ ಪತ್ರಿಕೆಯ ಉದ್ಯೋಗಿಯಾಗಿದ್ದರು. ರಾಣಿಗಂಜ್ ನಲ್ಲಿರುವ ಅವರ ನಿವಾಸಕ್ಕೆ ಬಂದಿರುವ ನಾಲ್ವರು ಅಪರಿಚಿತರು ಅವರ ಎದೆ ಭಾಗಕ್ಕೆ ಗುಂಡಿನ ದಾಳಿ ನಡೆಸಿದ್ದಾರೆ. ಆ ಗುಂಡಿನ ದಾಳಿಯಲ್ಲಿ ಯಾದವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆಯಿಂದ ಮರಣೋತ್ತರ ಪರೀಕ್ಷಾ ಸ್ಥಳದಲ್ಲಿ ಭಾರೀ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಹಾಗೂ ಆ ಪ್ರದೇಶದ ಸಂಸದರು ಹಾಜರಿದ್ದರು.

ಅರಾರಿಯಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ಪ್ರಕಾರ, “ಬಿಹಾರದ ಅರಾರಿಯಾ ಜಿಲ್ಲೆಯ ರಾಣಿಗಂಜ್ ಮಾರ್ಕೆಟ್ ಪ್ರದೇಶದಲ್ಲಿ ನಾಲ್ವರು ಅಪರಿಚಿತ ದುಷ್ಕರ್ಮಿಗಳು ದೈನಿಕ್ ಜಾಗರಣ್ ಪತ್ರಿಕೆಯ ಪತ್ರಕರ್ತರಾಗಿದ್ದ ವಿಮಲ್ ಯಾದವ್ ಎಂಬುವವರನ್ನು ಇಂದು ಮುಂಜಾನೆ ಸುಮಾರು 5.30ರಲ್ಲಿ ಗುಂಡಿಟ್ಟು ಹತ್ಯೆಗೈದಿದ್ದಾರೆ. ಸುದ್ದಿ ತಿಳಿದು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳಕ್ಕೆ ಧಾವಿಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ” ಎಂದು ತಿಳಿಸಿದ್ದಾರೆ.

ಈ ಸಂಬಂಧ ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ನಾಯಕ ಚಿರಾಗ್ ಪಾಸ್ವಾನ್ ಅವರು ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಫಲಗೊಂಡಿದೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News