ಬಿಹಾರದ ಲೆಫ್ಟಿನೆಂಟ್ ಕರ್ನಲ್ ರಾಂಚಿಯಲ್ಲಿ ಮೃತ್ಯು; ತನಿಖೆ ಆರಂಭ

Update: 2025-03-19 07:00 IST
ಬಿಹಾರದ ಲೆಫ್ಟಿನೆಂಟ್ ಕರ್ನಲ್ ರಾಂಚಿಯಲ್ಲಿ ಮೃತ್ಯು; ತನಿಖೆ ಆರಂಭ
  • whatsapp icon

ರಾಂಚಿ: ಭಾರತೀಯ ಸೇನೆಯ ದಿಪಟೋಲಿ ಕಂಟೋನ್ಮೆಂಟ್ನಲ್ಲಿ 2019ರಿಂದ ಸೇವೆಯಲ್ಲಿದ್ದ 49 ವರ್ಷ ವಯಸ್ಸಿನ ಲೆಫ್ಟಿನೆಂಟ್ ಕರ್ನಲ್ ಅವರ ಮೃತದೇಹ ಖೇಲ್ ಗಾಂವ್ ಹೌಸಿಂಗ್ ಕಾಂಪ್ಲೆಕ್ಸ್ ನಲ್ಲಿ ಮಂಗಳವಾರ ಪತ್ತೆಯಾಗಿದೆ. ಇವರು ಮೂಲತಃ ಬಿಹಾರದ ಮುಜಾಫರ್ ಪುರ ಜಿಲ್ಲೆಯವರು.

ಮೃತ ಅಧಿಕಾರಿಯನ್ನು ದಿವಾಕರ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರ ಕುಟುಂಬ ಖೇಲ್ ಗಾಂವ್ ಹೌಸಿಂಗ್ ಕಾಂಪ್ಲೆಕ್ಸ್ ನಲ್ಲಿ ವಾಸವಿತ್ತು. ಕಳೆದ ಕೆಲ ತಿಂಗಳುಗಳಿಂದ ಸಿಂಗ್ ಅವರಿಗೆ ತೀವ್ರ ಕೆಲಸದ ಒತ್ತಡವಿತ್ತು ಎಂದು ಕುಟುಂಬದವರು ಹೇಳಿದ್ದಾರೆ. ಸಿಂಗ್ ಈ ಮೊದಲು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಸೇವೆ ಸಲ್ಲಿಸಿದ್ದರು.

ಈ ಸಾವಿನ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ದೂರವಾಣಿ ಮೂಲಕ ತಿಳಿಸಿದ್ದಾರೆ. ಆದರೆ ಅವರ ಮೇಲೆ ಕೆಲಸದ ಒತ್ತಡವಿತ್ತು ಎಂಬ ಕುಟುಂಬದ ಆರೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಹೌಸಿಂಗ್ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರು ಸಿಂಗ್ ಅವರ ಮೃತದೇಹವನ್ನು ಪತ್ತೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯಿಂದ ತಿಳಿದು ಬರುವಂತೆ ಸಿಂಗ್ ವಸತಿ ಸಂಕೀರ್ಣದ ಕಟ್ಟಡದ ಮೇಲಿನಿಂದ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿನ ಕಾರಣ ದೃಢಪಡಲಿದೆ. ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡಸಲಾಗುತ್ತಿದೆ ಎಂದು ಖೇಲ್ ಗಾಂವ್ ಠಾಣಾಧಿಕಾರಿ ಚಂದ್ರಶೇಖರ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News