ರಾಷ್ಟ್ರ ರಾಜಧಾನಿಯಲ್ಲಿ ಮೈಕೊರೆಯುವ ಚಳಿ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಇಡೀ ದಿನ ಸೂರ್ಯನನ್ನು ಕಾಣದೇ ಜನರು ಮೈಕೊರೆಯುವ ಚಳಿಯಿಂದ ಬವಣೆಪಡುವಂತಾಯಿತು. ಸಪ್ಧರ್ ಜಂಗ್ ನಲ್ಲಿ ದಿನದ ಗರಿಷ್ಠ ತಾಪಮಾನ 13.4 ಡಿಗ್ರಿ ದಾಖಲಾಗಿದ್ದು, ಇದು ಹಿಂದಿನ ದಿನದ ತಾಪಮಾನಕ್ಕಿಂತ 4 ಡಿಗ್ರಿ ಕಡಿಮೆ.
ಇಡೀ ಹಗಲು ನಗರಾದ್ಯಂತ ಮತ್ತು ಸುತ್ತಮುತ್ತಲ ನಗರಗಳಲ್ಲಿ ಚಳಿಯ ವಾತಾವರಣ ಕಂಡುಬಂದಿದ್ದು, ಗುರುಗಾಂವ್, ಗಾಜಿಯಾಬಾದ್ ಮತ್ತು ನೋಯ್ಡಾದ ಎಲ್ಲ ವೀಕ್ಷಣಾ ಕೇಂದ್ರಗಳಲ್ಲೂ "ಶೀತ ದಿನ" ಸ್ಥಿತಿ ದಾಖಲಾಗಿದೆ.
ಪೀತಂಪುರದಲ್ಲಿ ಗರಿಷ್ಠ 14.3 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, ಗಾಜಿಯಾಬಾದ್ ನಲ್ಲಿ ಕನಿಷ್ಠ ಅಂದರೆ 12.8 ಡಿಗ್ರಿ ಉಷ್ಣಾಂಶ ಇತ್ತು. ಬುಧವಾರ ಕೂಡಾ ದಟ್ಟ ಮಂಜು ಮತ್ತು ಮಂದ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ವಾಡಿಕೆಗಿಂತ ಕನಿಷ್ಠ 4.5 ಡಿಗ್ರಿ ಸೆಲ್ಷಿಯಸ್ ತಾಪಮಾನ ಕಡಿಮೆ ಇದ್ದರೆ ಅದನ್ನು ತೀರಾ ಚಳಿಯ ದಿನ ಎಂದು ಪರಿಣಿಸಲಾಗುತ್ತದೆ. 6.5 ಡಿಗ್ರಿಯಷ್ಟು ಕಡಿಮೆ ತಾಪಮಾನ ದಾಖಲಾದರೆ ಅದನ್ನು ತೀವ್ರ ಚಳಿಯ ದಿನ ಎಂದು ಪರಿಣಿಸಲಾಗುತ್ತದೆ.
ಸಪ್ಧರ್ ಜಂಗ್ ನಲ್ಲಿ ಮಂಗಳವಾರ ದಾಖಲಾದ ತಾಪಮಾನ ಕಳೆದ ವಾರ ದಾಖಲಾದ 12.5 ಡಿಗ್ರಿ ಸೆಲ್ಷಿಯಸ್ ಹೊರತುಪಡಿಸಿದರೆ ಎರಡು ವರ್ಷಗಳಷ್ಟೇ ಕನಿಷ್ಠ. ರಾಜಧಾನಿಯಲ್ಲಿ ಮೈಕೊರೆಯುವ ಚಳಿ ಸತತ 12 ದಿನ ದಾಖಲಾಗಿದ್ದು, ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಿದೆ.