ಪಹಲ್ಗಾಮ್ ಭಯೋತ್ಪಾದಕ ದಾಳಿ: ಭದ್ರತಾ ವೈಫಲ್ಯದ ಕುರಿತು ಪ್ರಶ್ನಿಸಿದ ಪತ್ರಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ; ವರದಿ

ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬುಧವಾರ ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನು ಸೆರೆ ಹಿಡಿಯುತ್ತಿದ್ದ ʼದೈನಿಕ್ ಜಾಗರಣ್ʼ ದಿನಪತ್ರಿಕೆಯ ಪತ್ರಕರ್ತರೊಬ್ಬರು ಹಲ್ಲೆಗೀಡಾಗಿ, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಲ್ಲೆಗೀಡಾದ ಪತ್ರಕರ್ತರನ್ನು ರಾಕೇಶ್ ಶರ್ಮ ಎಂದು ಗುರುತಿಸಲಾಗಿದ್ದು, ಅವರು ಶಾಸಕ ದೇವಿಂದರ್ ಮಾನ್ಯಲ್, ರಾಜೀವ್ ಜಸ್ರೋತಿಯ ಹಾಗೂ ಭರತ್ ಭೂಷಣ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯನ್ನು ಸೆರೆ ಹಿಡಿಯುತ್ತಿದ್ದರು ಎನ್ನಲಾಗಿದೆ. ಈ ವೇಳೆ, ಭದ್ರತೆಗೆ ಸಂಬಂಧಿಸಿದಂತೆ ರಾಕೇಶ್ ಶರ್ಮ ಕೇಳಿದ ಪ್ರಶ್ನೆಗೆ ಕುಪಿತಗೊಂಡ ಹಿಮಾಂಶು ಶರ್ಮ ಎಂಬ ಬಿಜೆಪಿ ಕಾರ್ಯಕರ್ತನೊಬ್ಬ, “ನೀನು ವಿಭಜನಕಾರಿ ಭಾಷೆ ಬಳಸುತ್ತಿದ್ದೀಯ” ಎಂದು ಆರೋಪಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರತಿಭಟನೆಯ ವೇಳೆ ಶಾಸಕ ದೇವಿಂದರ್ ಮಾನ್ಯಲ್ ಅವರು ಪತ್ರಕರ್ತರ ಪ್ರಶ್ನೆಗೆ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಿದ್ದರೂ, “ಪಹಲ್ಗಾಮ್ ಭಯೋತ್ಪಾದಕ ದಾಳಿಯು ಗಡಿ ನುಸುಳುವಿಕೆ ತಡೆಯುವಲ್ಲಿನ ಕೇಂದ್ರ ಸರಕಾರದ ವೈಫಲ್ಯವನ್ನು ತೋರಿಸುತ್ತಿದೆಯೆ?” ಎಂದು ಕೆಲ ಪತ್ರಕರ್ತರು ಕೇಳಿದ ಪ್ರಶ್ನೆಯಿಂದ ಇನ್ನಿತರ ಬಿಜೆಪಿ ಪಕ್ಷದ ಪದಾಧಿಕಾರಿಗಳು ಆಕ್ರೋಶಗೊಂಡರು ಎಂದು ಹೇಳಲಾಗಿದೆ.
ಈ ವೇಳೆ ಪ್ರಕ್ಷುಬ್ಧತೆ ಉಂಟಾಗಿ, ಇತರ ಪತ್ರಕರ್ತರು ಪ್ರತಿಭಟನೆಯನ್ನು ಬಹಿಷ್ಕರಿಸಿ, ಅಲ್ಲಿಂದ ವಾಪಸ್ಸಾಗಲು ನಿರ್ಧರಿಸಿದ್ದಾರೆ. ಆದರೆ, ಹಿಮಾಂಶು ಶರ್ಮ ಎಂಬ ಬಿಜೆಪಿ ಕಾರ್ಯಕರ್ತನೊಬ್ಬ ಇನ್ನಿತರರೊಂದಿಗೆ ಸೇರಿಕೊಂಡು ರಾಕೇಶ್ ಶರ್ಮ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ನಂತರ, ಉಪ ಪೊಲೀಸ್ ವರಿಷ್ಠಾಧಿಕಾರಿ ರವೀಂದರ್ ಸಿಂಗ್ ಅವರು ರಾಕೇಶ್ ಶರ್ಮರನ್ನು ಸರಕಾರಿ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರ ಗುಂಪೊಂದು ತೋಳಿಗೆ ಕಪ್ಪು ಪಟ್ಟಿ ಧರಿಸಿ, ಕಥುವಾದ ಶಹೀದ್ ಚೌಕ್ ನಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ, ಈ ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವವರೆಗೂ ಬಿಜೆಪಿಯ ಎಲ್ಲ ಕಾರ್ಯಕ್ರಮಗಳನ್ನೂ ಬಹಿಷ್ಕರಿಸಲಾಗುವುದು ಎಂದು ಅವರು ಘೋಷಿಸಿದರು. ಕಠುವಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೋಭಿತ್ ಸಕ್ಸೇನಾರನ್ನೂ ಭೇಟಿಯಾದ ಪತ್ರಕರ್ತರು, ಘಟನೆಯ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಬೇಕು ಎಂದು ಅವರನ್ನು ಆಗ್ರಹಿಸಿದರು.