ವಿಧಿ 370ರ ಕುರಿತು ಬ್ಯಾನರ್ ಪ್ರದರ್ಶನ: ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ

Update: 2024-11-07 06:12 GMT

Photo credit: indiatoday.in

ಜಮ್ಮು, ಕಾಶ್ಮೀರ: ವಿಧಿ 370ರ ಕುರಿತು ಬಾರಾಮುಲ್ಲಾ ಲೋಕಸಭಾ ಸಂಸದ ಇಂಜಿನಿಯರ್ ರಶೀದ್ ಅವರ ಸಹೋದರ ಖುರ್ಷಿದ್ ಅಹ್ಮದ್ ಶೇಖ್ ಬ್ಯಾನರ್ ಪ್ರದರ್ಶಿಸಿದ ಬಳಿಕ ಜಮ್ಮು, ಕಾಶ್ಮೀರ ವಿಧಾನಸಭೆಯಲ್ಲಿ ಗುರುವಾರ ಭಾರೀ ಗದ್ದಲ ಏರ್ಪಟ್ಟಿದ್ದು, ಕೆಲ ಶಾಸಕರು ಸದನದಲ್ಲಿ ನೂಕಾಟ ತಳ್ಳಾಟ ನಡೆಸಿದ್ದಾರೆ.

ಲಂಗೇಟ್ ಕ್ಷೇತ್ರವನ್ನು ಪ್ರತಿನಿಧಿಸುವ ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹ್ಮದ್ ಶೇಖ್ ಅವರು ವಿಧಿ 370ರ ಕುರಿತ ಬ್ಯಾನರ್ ಪ್ರದರ್ಶಿಸುವುದಕ್ಕೆ ಬಿಜೆಪಿ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನೀಲ್ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲಿ ಸದನದಲ್ಲಿ ಗೊಂದಲ ಭುಗಿಲೆದ್ದಿದೆ. ಇದರಿಂದ ಸಭಾಪತಿ ಕಲಾಪವನ್ನು ಕೆಲಕಾಲ ಮುಂದೂಡಿದ್ದಾರೆ.

ಸಂವಿಧಾನದ 370ನೇ ವಿಧಿಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತುಕತೆಗಳನ್ನು ನಡೆಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಬಿಜೆಪಿಯ ಪ್ರಬಲ ವಿರೋಧದ ನಡುವೆಯೇ ಬುಧವಾರ ಅಂಗೀಕರಿಸಿತ್ತು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News