ಚುನಾವಣಾ ಬಾಂಡ್ ನ ಮೂಲ ತಿಳಿಯುವ ಹಕ್ಕು ನಾಗರಿಕರಿಗೆ ಇಲ್ಲ: ಕೇಂದ್ರ ಸರ್ಕಾರ
ಹೊಸದಿಲ್ಲಿ: ಚುನಾವಣಾ ಬಾಂಡ್ ನ ಮೂಲ ತಿಳಿಯುವ ಹಕ್ಕು ನಾಗರಿಕರಿಗೆ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ತನ್ನ ವಾದ ಮಂಡಿಸಿದೆ. ರಾಜಕೀಯ ಪಕ್ಷಗಳಿಗೆ "ಅಪಾರದರ್ಶಕ" ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆ ನೀಡುವ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಈ ವಾದ ಮಂಡಿಸಿದರು. ಈ ನಿಧಿಗಳ ಮೂಲವನ್ನು ತಿಳಿದುಕೊಳ್ಳುವ ಹಕ್ಕನ್ನು ಸಂವಿಧಾನ ನಾಗರಿಕರಿಗೆ ಮೂಲಭೂತ ಹಕ್ಕಾಗಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಚುನಾವಣಾ ಬಾಂಡ್ ಗಳನ್ನು ನಿಯಂತ್ರಿಸುವ ಸಲುವಾಗಿ ನೀತಿ ರೂಪಿಸುವ ಕಾರ್ಯಕ್ಕೆ ಸುಪ್ರೀಂಕೋರ್ಟ್ ಮುಂದಾಗಬಾರದು ಎಂದು ಅವರು ಎಚ್ಚರಿಕೆ ನೀಡಿದರು.
ಅಕ್ಟೋಬರ್ 31ರಂದು ನಡೆಯುವ ವಿಚಾರಣೆ ಹಿನ್ನೆಯಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠದ ಮುಂದೆ ವಾದ ಮಂಡಿಸಿದ ವೆಂಕಟರಮಣಿ, "ಈ ಯೋಜನೆಯು ಯಾವುದೇ ವ್ಯಕ್ತಿಗಳ ಪ್ರಸ್ತುತ ಇರುವ ಹಕ್ಕನ್ನು ಉಲ್ಲಂಘಿಸುವುದಿಲ್ಲ. ಅಂತೆಯೇ ಸಂವಿಧಾನದ 3ನೇ ವಿಭಾಗದ ಅಡಿಯಲ್ಲಿ ನೀಡಿರುವ ಯಾವುದೇ ಹಕ್ಕುಗಳಿಗೆ ಅಸಂಗತ ಎನಿಸುವುದಿಲ್ಲ. ಆದ್ದರಿಂದ ಯೋಜನೆ ಕಾನೂನುಬಾಹಿರವಲ್ಲ. ಅಸಂಗತ ಎನಿಸದ ಯಾವುದೇ ಕಾನೂನನ್ನು ಯಾವುದೇ ಕಾರಣಕ್ಕೆ ರದ್ದುಪಡಿಸುವಂತಿಲ್ಲ" ಎಂದು ಸ್ಪಷ್ಟಪಡಿಸಿದರು.
ಉತ್ತಮ ಅಥವಾ ಭಿನ್ನ ಸಲಹೆಗಳನ್ನು ನೀಡುವ ಉದ್ದೇಶಕ್ಕೆ ಸರ್ಕಾರದ ನೀತಿಗಳನ್ನು ನ್ಯಾಯಾಂಗ ಪರಾಮರ್ಶೆ ಮಾಡುವಂತಿಲ್ಲ ಎಂದು 2003ರಲ್ಲಿ ಪಿಯುಸಿಎಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದರು.
ಚುನಾವಣಾ ಬಾಂಡ್ ಯೋಜನೆಯು ದೇಣಿಗೆ ನೀಡಿದ ಸಂಸ್ಥೆಗೆ ಗೌಪ್ಯತೆಯ ಪ್ರಯೋಜನವನ್ನು ನೀಡುತ್ತದೆ. ಸ್ವಚ್ಛ ಹಣ ದೇಣಿಗೆಯಾಗಿ ನೀಡುವಂತೆ ಇದು ಉತ್ತೇಜಿಸುತ್ತದೆ ಹಾಗೂ ಇದನ್ನು ಖಾತರಿಪಡಿಸುತ್ತದೆ. ಎಲ್ಲ ತೆರಿಗೆ ಹೊಣೆಗಾರಿಕೆಗಳಿಗೆ ಬದ್ಧವಾಗಿದೆ. ಆದ್ದರಿಂದ ಹಾಲಿ ಇರುವ ಯಾವುದೇ ಹಕ್ಕುಗಳಿಗೆ ವಿರುದ್ಧ ಎನಿಸುವುದಿಲ್ಲ" ಎಂದರು.