7ನೇ ತರಗತಿ ವಿದ್ಯಾರ್ಥಿಗೆ "ನೀನು ಗಾಂಜಾ ವ್ಯಸನಿಯೆ?" ಎಂದು ಪ್ರಶ್ನಿಸಿದ ಶಿಕ್ಷಕ!

Update: 2024-02-23 18:49 IST
7ನೇ ತರಗತಿ ವಿದ್ಯಾರ್ಥಿಗೆ "ನೀನು ಗಾಂಜಾ ವ್ಯಸನಿಯೆ?" ಎಂದು ಪ್ರಶ್ನಿಸಿದ ಶಿಕ್ಷಕ!
  • whatsapp icon

ತಿರುವನಂತಪುರಂ: ಶಾಲಾ ಶಿಕ್ಷಕರೊಬ್ಬರು "ನೀನು ಗಾಂಜಾ ವ್ಯಸನಿಯೆ?" ಎಂದು ಪ್ರಶ್ನಿಸಿದರೆಂದು ಏಳನೆ ತರಗತಿಯ ವಿದ್ಯಾರ್ಥಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಹದಿಮೂರು ವರ್ಷದ ಪ್ರಜಿತ್ ಮನೋಜ್ ಎಂದು ಗುರುತಿಸಲಾಗಿದ್ದು, ಕತ್ತೂರಿನ ಹೋಲಿ ಫ್ಯಾಮಿಲಿ ವಿಸಿಟೇಶನ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆತ ಫೆಬ್ರವರಿ 15ರಂದು ತನ್ನ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಥಳಿಸಿರುವ ಶಿಕ್ಷಕರೊಬ್ಬರು, ಆತನನ್ನು ಗಾಂಜಾ ವ್ಯಸನಿ ಎಂದು ದೂರಿದ್ದು, ಇನ್ನಿತರ ಇಬ್ಬರು ಶಿಕ್ಷಕರೂ ಆತನಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ವರದಿಗಳ ಪ್ರಕಾರ, ಪ್ರಜಿತ್ ಹಾಗೂ ಅಸ್ವಸ್ಥಗೊಂಡಿದ್ದ ಆತನ ಗೆಳೆಯನೊಬ್ಬ ನೀರು ಕುಡಿಯಲು ತೆರಳಿ ಕೊನೆ ಅವಧಿಯ ತರಗತಿಗೆ ತಡವಾಗಿ ಆಗಮಿಸಿದ್ದರು. ಅವರು ತರಗತಿಗೆ ಮರಳಿದಾಗ ಶಿಕ್ಷಕ ಕ್ರಿಸ್ತು ದಾಸ್ ಕೋಲಿನಿಂದ ಪ್ರಜಿತ್‌ನನ್ನು ಥಳಿಸಿದ್ದು, ನೀನೇನಾದರೂ ಗಾಂಜಾ ವ್ಯಸನಿಯೆ ಎಂದು ಪ್ರಶ್ನಿಸಿದ್ದಾರೆ. ಇನ್ನಿಬ್ಬರು ಶಿಕ್ಷಕಿಯರಾದ ರೇಷ್ಮಾ ಹಾಗೂ ಡಾಲಿ ಆತನಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಜಿತ್ ಗೆಳೆಯನ ಪ್ರಕಾರ, ಆ ಘಟನೆಯಿಂದ ಪ್ರಜಿತ್ ಖಿನ್ನತೆಗೊಳಗಾಗಿದ್ದ ಎಂದು ಹೇಳಲಾಗಿದೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಶಾಲೆಯ ಮುಖ್ಯ ಶಿಕ್ಷಕಿ, ಆತನಿಗೆ ಆತನ ತಂದೆಯನ್ನು ಕರೆದುಕೊಂಡು ಬರುವಂತೆ ಮಾತ್ರ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.

ಈ ಘಟನೆಯ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗವು ಮಾಧ್ಯಮಗಳಿಗೆ ತಿಳಿಸಿದೆ. ಈಗಾಗಲೇ ಪೊಲೀಸರು ಪ್ರಜಿತ್ ಸಹಪಾಠಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಇಂದು (ಶುಕ್ರವಾರ) ಮಕ್ಕಳ ಕಲ್ಯಾಣ ಸಮಿತಿಯು ಶಿಕ್ಷಕರಿಂದ ಹೇಳಿಕೆಗಳನ್ನು ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News