ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತರಾಟೆಗೆ ತೆಗೆದುಕೊಂಡ ಸಿಎಂ ಪಿಣರಾಯಿ ವಿಜಯನ್

Update: 2023-10-29 18:22 GMT

ತಿರುವನಂತಪುರಂ: ಕಲಮಶ್ಶೆರಿಯ ಪ್ರಾರ್ಥನಾ ಕೇಂದ್ರವೊಂದರಲ್ಲಿ ನಡೆದ ಸ್ಫೋಟದ ಕುರಿತು ತಮ್ಮನ್ನು ಟೀಕಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅದು ಅವರ ಕೋಮುವಾದಿ ನಿಲುವಿನ ಭಾಗವಾಗಿದೆ ಎಂದು ಕಿಡಿ ಕಾರಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ರಾಜೀವ್ ಚಂದ್ರಶೇಖರ್ ಅವರನ್ನು ಹೆಸರಿಸದೆ, ಕೇಂದ್ರ ಸಚಿವರು ಯಾವ ಮಾಹಿತಿಯನ್ನು ಆಧರಿಸಿ ನನ್ನ ವಿರುದ್ಧ ಅಂತಹ ಪೋಸ್ಟ್ ಮಾಡಿದ್ದಾರೆ? ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ತನಿಖೆಯು ಪ್ರಗತಿಯಲ್ಲಿರುವಾಗ ಅಂತಹ ಹೇಳಿಕೆಯನ್ನು ನೀಡಲು ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದರು.

ವಿಧಾನಸಭಾ ಕಾರ್ಯಾಲಯ ಸಂಕೀರ್ಣದಲ್ಲಿ ಆಯೋಜಿಸಲಾಗಿದ್ದ ವಿವರಣಾ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, x ಸಾಮಾಜಿಕ ಮಾಧ್ಯಮದಲ್ಲಿ ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಯಲ್ಲಿ ರಾಜೀವ್ ಚಂದ್ರಶೇಖರ್ ಪೋಸ್ಟ್ ಮಾಡಿರುವ ಹೇಳಿಕೆಯನ್ನು ಓದಿ ಹೇಳಿದರು.

ಆ ಪೋಸ್ಟ್ನಲ್ಲಿ, "ಬೆಲೆ ಕಳೆದುಕೊಂಡ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ @pinarayivijayan ಅವರಿಂದ ನಾಚಿಕೆಗೇಡು. ತುಷ್ಟೀಕರಣ ರಾಜಕಾರಣ ನಡೆಯುತ್ತಿದ್ದು, ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕಿದ್ದಾರೆ. ಕೇರಳದಲ್ಲಿ ಜಿಹಾದ್ಗಾಗಿನ ಹಮಾಸ್ ಭಯೋತ್ಪಾದಕರು ಮುಗ್ಧ ಕ್ರಿಶ್ಚಿಯನ್ನರ ಮೇಲೆ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸುವಾಗ ದಿಲ್ಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟಿಸುತ್ತಿದ್ದಾರೆ" ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದರು.

ಈ ಪೋಸ್ಟ್ ಅನ್ನು ಉಲ್ಲೇಖಿಸಿದ ಪಿಣರಾಯಿ ವಿಜಯನ್, ಆ ಹೇಳಿಕೆಯು ಸಂಪೂರ್ಣವಾಗಿ ಕೋಮುವಾದಿ ಮನಸ್ಥಿತಿಯ ಪ್ರತಿಫಲನವಾಗಿದೆ ಎಂದು ಆರೋಪಿಸಿದರು.

"ಸಚಿವ ಸ್ಥಾನವನ್ನು ಹೊಂದಿರುವ ವ್ಯಕ್ತಿಯೊಬ್ಬ, ತನಿಖಾ ಸಂಸ್ಥೆಗಳಿಗೆ ಕನಿಷ್ಠ ಗೌರವವನ್ನಾದರೂ ನೀಡಬೇಕು. ಘಟನೆಯ ಕುರಿತು ಕೇರಳ ಪೊಲೀಸರು ತನಿಖೆ ನಡೆಸುತ್ತಿದ್ದರೂ, ಕೇಂದ್ರ ತನಿಖಾ ಸಂಸ್ಥೆಗಳು ಘಟನಾ ಸ್ಥಳವನ್ನು ತಲುಪಿವೆ ಎಂಬ ವರದಿಗಳನ್ನು ನಾವೆಲ್ಲ ನೋಡುತ್ತಿದ್ದೇವೆ" ಎಂದು ಅವರು ಹರಿಹಾಯ್ದರು.

ಅವರು ನಿರ್ಧಿಷ್ಟ ಗುಂಪೊಂದನ್ನು ಗುರಿಯಾಗಿಸಿಕೊಂಡಿದ್ದು, ಅದು ಅವರ ಕೋಮುವಾದಿ ನಿಲುವಿನ ಭಾಗವಾಗಿದೆ. ಆದರೆ, ಕೇರಳವೆಂದೂ ಅವರ ಕಾರ್ಯಸೂಚಿಯ ಪರವಿಲ್ಲ ಎಂದು ಅವರು ಟೀಕಿಸಿದರು.

ಅಂತಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದಿರುವ ಪಿಣರಾಯಿ ವಿಜಯನ್, ಅಂತಹ ಅಭಿಯಾನಗಳಿಗೆ ಬಲಿಯಾಗಬಾರದು ಎಂದು ಕೇರಳ ಜನತೆಗೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News