ಕೋಲ್ಡ್‌ಪ್ಲೇ ‘ಟಿಕೆಟ್ ಹಗರಣ’: ʼಬುಕ್‌ಮೈಶೋʼ ವಿರುದ್ಧ ದೂರು ದಾಖಲು

Update: 2024-09-27 13:04 GMT

 Screengrab | X/@coldplay

ಮುಂಬೈ: ಭಾರತದಲ್ಲಿ ಬ್ರಿಟಿಷ್ ಬ್ಯಾಂಡ್ ‘ಕೋಲ್ಡ್‌ಪ್ಲೇ’ ಗುಂಪಿನ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬೃಹತ್ ಟಿಕೆಟ್ ಹಗರಣಕ್ಕೆ ಬುಕ್‌ಮೈಶೋ ಮತ್ತು ಲೈವ್ ನೇಷನ್ ಎಂಟರ್‌ಟೇನ್‌ಮೆಂಟ್ ಕಾರಣವಾಗಿವೆ ಎಂದು ಆರೋಪಿಸಿ ಮುಂಬೈನ ವಕೀಲರೋರ್ವರು ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು)ಕ್ಕೆ ದೂರು ಸಲ್ಲಿಸಿದ್ದಾರೆ.

2025 ಜನವರಿಯಲ್ಲಿ ನವಿಮುಂಬೈನ ಡಿವೈ ಪಾಟೀಲ್ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಕ್ರಮದ ಟಿಕೆಟ್‌ಗಳ ಮಾರಾಟವನ್ನು ಆರೋಪಗಳು ಕೇಂದ್ರೀಕರಿಸಿವೆ. ಕೋಲ್ಡ್‌ಪ್ಲೇದ ಅಧಿಕೃತ ಟಿಕೆಟ್ ಮಾರಾಟ ವೇದಿಕೆ ಬುಕ್‌ಮೈಶೋದಲ್ಲಿ ಸೆ.22ರಂದು ಟಿಕೆಟ್‌ಗಳು ಲೈವ್ ಆಗಿದ್ದವು.

ವರ್ಟೈಸಸ್ ಪಾರ್ಟನರ್ಸ್‌ನ ಸ್ಥಾಪಕ ಪಾಲುದಾರ ಅಮಿತ ವ್ಯಾಸ್ ಟಿಕೆಟಿಂಗ್ ಪ್ಲ್ಯಾಟ್‌ಫಾರ್ಮಗಳ ವಿರುದ್ಧ ಗಂಬೀರ ಆರೋಪಗಳನ್ನು ಹೊರಿಸಿದ್ದಾರೆ. ಅವು ಬಳಕೆದಾರರನ್ನು ನಿರ್ಬಂಧಿಸುವ ಅಥವಾ ಅವರನ್ನು ಬಲವಂತದಿಂದ ಲಾಗ್‌ಔಟ್ ಮಾಡುವ ಮೂಲಕ ಟಿಕೆಟ್ ಮಾರಾಟದಲ್ಲಿ ಹಸ್ತಕ್ಷೇಪ ನಡೆಸಿವೆ ಮತ್ತು ಇದು ಬಾಟ್‌ಗಳು ಮತ್ತು ಕಾಳಸಂತೆ ಖದೀಮರು ಟಿಕೆಟ್ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಲು ಅವಕಾಶ ಕಲ್ಪಿಸಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.

ಬುಕ್‌ಮೈಶೋನಲ್ಲಿ ಮಾರಾಟವಾಗಿದೆ ಎಂದು ತೋರಿಸಲಾಗಿದ್ದ ಟಿಕೆಟ್‌ಗಳು ನಂತರ ವಿಯಾಗೊಗೊದಂತಹ ಮರುಮಾರಾಟ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಮೂಲಬೆಲೆಯ 30ರಿಂದ 50 ಪಟ್ಟು ಹೆಚ್ಚಿನ ಬೆಲೆಗಳಲ್ಲಿ ಲಭ್ಯವಿದ್ದವು ಎಂದು ವ್ಯಾಸ್ ತನ್ನ ದೂರಿನಲ್ಲಿ ಒತ್ತಿ ಹೇಳಿದ್ದಾರೆ. ಇದು ಗ್ರಾಹಕರ ಹಕ್ಕುಗಳು ಮತ್ತು ಭಾರತೀಯ ಕ್ರಿಮಿನಲ್ ಕಾನೂನಿನ ವಿವಿಧ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.

ಜೊತೆಗೆ ಭಾರತೀಯ ನ್ಯಾಯ ಸಂಹಿತಾ 2023ರಡಿ ಎಫ್‌ಐಆರ್ ದಾಖಲಿಸಲು ವ್ಯಾಸ್ ಉದ್ದೇಶಿಸಿದ್ದು,ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲೂ ಯೋಜಿಸುತ್ತಿದ್ದಾರೆ.

ಬುಕ್‌ಮೈಶೋ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆ. ಭಾರತದಲ್ಲಿ ಕೋಲ್ಡ್‌ಪ್ಲೇದ ಮ್ಯೂಸಿಕ್ ಆಫ್ ದಿ ಸ್ಪಿಯರ್ಸ್ ವರ್ಲ್ಡ್ ಟೂರ್‌ನ ಟಿಕೆಟ್‌ಗಳ ಮರುಮಾರಾಟದ ಉದ್ದೇಶಕ್ಕಾಗಿ ವಿಯಾಗೊಗೊ ಅಥವ ಗಿಗ್ಸ್‌ಬರ್ಗ್ ಅಥವಾ ಇತರ ಯಾವುದೇ ವ್ಯಕ್ತಿಗಳ ಜೊತೆ ತಾನು ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News