‘ಅಮೃತಕಾಲ’ದಲ್ಲಿ ಭ್ರಷ್ಟಾಚಾರದ ತಾಂಡವ: ರಾಹುಲ್
ಹೊಸದಿಲ್ಲಿ :ಪ್ರಗತಿ ಮೈದಾನ ಸುರಂಗಮಾರ್ಗ ಕಾಮಗಾರಿಯಲ್ಲಿ ನಿಚ್ಚಳವಾಗಿ ಕಾಣುತ್ತಿರುವ ನ್ಯೂನತೆಗಳಿಗಾಗಿ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್‌ಗಾಂಧಿ ಅವರು ಶುಕ್ರವಾರ ತೀವ್ರ ಟೀಕಾಪ್ರಹಾರ ನಡೆಸಿದ್ದು, ‘ಅಮೃತಕಾಲದಲ್ಲಿ’ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳಿದ್ದಾರೆ.
‘‘777 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಪ್ರಗತಿ ಮೈದಾನ ಸುರಂಗಮಾರ್ಗವು ಕೇವಲ ಒಂದು ವರ್ಷದಲ್ಲಿ ಬಳಕೆಗೆ ಅನರ್ಹವಾಗಿ ಬಿಟ್ಟಿದೆ. ‘ಪ್ಲ್ಯಾನಿಂಗ್’ ಕೈಗೊಳ್ಳುವುದರ ಬದಲಿಗೆ ಪ್ರಧಾನಿಯವರು ಮಾಡೆಲಿಂಗ್‌ನಲ್ಲಿ ನಿರತರಾಗಿದ್ದಾರೆ ಎಂದು ಪ್ರಧಾನಿ ಸಾಮಾಜಿಕಜಾಲತಾಣ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘‘ಜಾರಿ ನಿರ್ದೇಶಾಲಯ (ಈ.ಡಿ.), ಸಿಬಿಐ, ಆದಾಯ ತೆರಿಗೆ ಇಲಾಖೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು ಪ್ರಜಾಪ್ರಭುತ್ವದ ವಿರುದ್ಧ ಹೋರಾಡುತ್ತಿವೆ ಎಂದು ಹಿಂದಿ ಭಾಷೆಯಲ್ಲಿ ಮಾಡಿದ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ. ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಗತಿ ಮೈದಾನದ ಸುರಂಗಮಾರ್ಗವನ್ನು ಉದ್ಘಾಟಿಸುವ ಪೋಟೋವನ್ನು ಕೂಡಾ ಶೇರ್ ಮಾಡಿದ್ದಾರೆ.
ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯಡಿ ನಿರ್ಮಿಸಲಾಗಿದ್ದ 1.3 ಕಿ.ಮೀ.ವಿಸ್ತೀರ್ಣದ ಸುರಂಗಮಾರ್ಗ ಹಾಗೂ ಐದು ಅಂಡರ್‌ಪಾಸ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜೂನ್ 19ರಂದು ಉದ್ಘಾಟಿಸಿದ್ದರು. ಕೇಂದ್ರ ದಿಲ್ಲಿಯೊಂದಿಗೆ ನಗರದ ಪೂರ್ವಭಾಗಗಳು ಹಾಗೂ ಉಪನಗರಗಳಾದ ನೊಯ್ಡಾ ಹಾಗೂ ಗಾಝಿಯಾಬಾದ್‌ಗಳ ರಸ್ತೆ ಸಂಪರ್ಕವನ್ನು ಸುಗಮಗೊಳಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಪ್ರಗತಿ ಮೈದಾನ ಸುರಂಗ ಮಾರ್ಗ ಯೋಜನೆಯ ನಿರ್ಮಾಣ ಕಾಮಗಾರಿ ಯೋಜನೆಯಲ್ಲಿ ಲೋಪದೋಷಗಳು ನಿಚ್ಚಳವಾಗಿ ಕಂಡು ಬಂದಿರುವ ಬಗ್ಗೆ ದಿಲ್ಲಿ ಸರಕಾರದ ಸಾರ್ವಜನಿಕ ಕಾಮಗಾರಿ ಇಲಾಖೆ (ಪಿಡಬ್ಲ್ಯುಡಿ)ಯು ಲಾರ್ಸೆನ್ ಆ್ಯಂಡ್ ಟರ್ಬೊ ಕಂಪೆನಿಗೆ ನೋಟಿಸ್ ಜಾರಿಗೊಳಿಸಿತ್ತು ಹಾಗೂ ಸುರಂಗಮಾರ್ಗದ ದುರಸ್ತಿಕಾರ್ಯವನ್ನು ತಕ್ಷಣವೇ ಕೈಗೊಳ್ಳುವಂತೆ ನಿರ್ದೇಶಿಸಿತ್ತು ಹಾಗೂ ‘ಟೋಕನ್’ (ಪರಿಹಾರ) ಮೊತ್ತವಾಗಿ 500 ಕೋಟಿ ರೂ. ನೀಡುವಂತೆಯೂ ಆಗ್ರಹಿಸಿತ್ತು.