7 ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದ ಕೋವಿಡ್; 5 ಸೋಂಕಿತರು ಮೃತ್ಯು

Update: 2023-12-30 02:25 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿದ್ದು, ಶುಕ್ರವಾರ 797 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಏಳು ತಿಂಗಳಲ್ಲೇ ಗರಿಷ್ಠ ಸಂಖ್ಯೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಐದು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕೇರಳದಲ್ಲಿ ಎರಡು, ಮಹಾರಾಷ್ಟ್ರ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಈ ವರ್ಷದ ಮೇ ತಿಂಗಳ 18ರಂದು ದೇಶದಲ್ಲಿ ಒಂದು ದಿನದಲ್ಲಿ 865 ಪ್ರಕರಣಗಳು ದಾಖಲಾಗಿದ್ದನ್ನು ಹೊರತುಪಡಿಸಿದರೆ, ಶುಕ್ರವಾರ ದಾಖಲಾದ ಪ್ರಕರಣಗಳೇ ಗರಿಷ್ಠ. ಡಿಸೆಂಬರ್ 5ರವರೆಗೆ ದೈನಿಕ ಪ್ರಕರಣಗಳು ಎರಡಂಕಿಯಲ್ಲಿದ್ದವು. ಆದರೆ ಆ ಬಳಿಕ ಹೊಸ ಉಪಪ್ರಬೇಧ ಜೆಎನ್.1 ಪತ್ತೆ, ಚಳಿಯ ವಾತಾವರಣದ ಕಾರಣದಿಂದಾಗಿ ಪ್ರಕರಣಗಳ ಸಂಖ್ಯೆ ಏರುಮುಖಿಯಾಗಿದೆ.

ಕಳೆದ ವಾರದಲ್ಲಿ ಡಿಸೆಂಬರ್ 22ರಂದು ಗರಿಷ್ಠ ಅಂದರೆ 752 ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ವಾರದ ಗರಿಷ್ಠ ಸಂಖ್ಯೆ ಅದಕ್ಕಿಂತ ಅಧಿಕವಾಗಿರುವುದು, ದೇಶದಲ್ಲಿ ಸೋಂಕು ನಿಧಾನವಾಗಿ ಏರಿಕೆಯಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ.

ಸಾಂಕ್ರಾಮಿಕ ವ್ಯಾಪಕವಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. 2020ರ ಜನವರಿಯಲ್ಲಿ ಆರಂಭವಾದಾಗಿನಿಂದ 4.5 ಕೋಟಿ ಜನ ಇದುವರೆಗೆ ಸೋಂಕಿತರಾಗಿದ್ದು, 5.3 ಲಕ್ಷ ಸಾವುಗಳು ಸಂಭವಿಸಿವೆ. ಆರೋಗ್ಯ ಇಲಾಖೆಯ ವೆಬ್ಸೈಟ್ ಪ್ರಕಾರ ದೇಶದಲ್ಲಿ ಗುಣಮುಖರಾಗಿರುವ ದರ ಶೇಕಡ 98.8ರಷ್ಟಿದೆ. ಇದುವರೆಗೆ 220 ಕೋಟಿಗೂ ಅಧಿಕ ಕೋವಿಡ್ ಲಸಿಕೆಗಳನ್ನು ವಿತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News