ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ

Update: 2024-10-15 12:25 GMT

ಸಾಂದರ್ಭಿಕ ಚಿತ್ರ (Photo: PTI)

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನ.13ರಂದು ಉಪ ಚುನಾವಣೆ ಘೋಷಿಸಿದ್ದು, ನ.23ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗವು ತಿಳಿಸಿದೆ.

ಅ.18ರಂದು ಚುನಾವಣಾ ಅಧಿಸೂಚನೆಯು ಹೊರಬೀಳಲಿದ್ದು, ಅಂದಿನಿಂದಲೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅ.25ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅ.28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಆಯೋಗ ಹೇಳಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಈ.ತುಕಾರಾಮ್ ಸಂಸದರಾಗಿ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

ಚನ್ನಪಟ್ಟಣ ಕ್ಷೇತ್ರವನ್ನು ಎಚ್.ಡಿ.ಕುಮಾರಸ್ವಾಮಿ, ಶಿಗ್ಗಾಂವಿ ಕ್ಷೇತ್ರವನ್ನು ಬಸವರಾಜ ಬೊಮ್ಮಾಯಿ ಹಾಗೂ ಸಂಡೂರು ಕ್ಷೇತ್ರವನ್ನು ಈ.ತುಕಾರಾಮ್ ಪ್ರತಿನಿಧಿಸುತ್ತಿದ್ದರು. ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ಪ್ರತಿಪಕ್ಷ ಬಿಜೆಪಿ-ಜೆಡಿಎಸ್‍ಗೆ ಪ್ರತಿಷ್ಠೆಯಾಗಿರುವ ಮೂರು ಕ್ಷೇತ್ರಗಳ ಉಪಚುನಾವಣೆ ರಾಜ್ಯ ರಾಜಕೀಯದಲ್ಲಿ ತೀವ್ರ ಪೈಪೋಟಿ ಸೃಷ್ಟಿಸಿದೆ.

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ

► ಅ.18ಕ್ಕೆ ಚುನಾವಣಾ ಅಧಿಸೂಚನೆ ಪ್ರಕಟ

► ಅ.25ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

► ಅ.28ರಂದು ನಾಮಪತ್ರಗಳ ಪರಿಶೀಲನೆ

► ಅ.30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ

► ನ.13ಕ್ಕೆ ಚುನಾವಣೆ, ನ.23ಕ್ಕೆ ಫಲಿತಾಂಶ ಪ್ರಕಟ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News