ಮಹಾರಾಷ್ಟ್ರದ ಪ್ರಪ್ರಥಮ ಮುಸ್ಲಿಂ ಮಹಿಳಾ ಐಎಎಸ್ ಅಧಿಕಾರಿಯಾದ ಆಟೊರಿಕ್ಷಾ ಚಾಲಕನ ಪುತ್ರಿ ಆದಿಬಾ ಅನಂ!

Update: 2025-04-27 21:47 IST
ಮಹಾರಾಷ್ಟ್ರದ ಪ್ರಪ್ರಥಮ ಮುಸ್ಲಿಂ ಮಹಿಳಾ ಐಎಎಸ್ ಅಧಿಕಾರಿಯಾದ ಆಟೊರಿಕ್ಷಾ ಚಾಲಕನ ಪುತ್ರಿ ಆದಿಬಾ ಅನಂ!

Photo : newindianexpress

  • whatsapp icon

ಮುಂಬೈ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಅತಿ ಹೆಚ್ಚು ರೈತ ಆತ್ಮಹತ್ಯೆಗೆ ಕುಖ್ಯಾತವಾದ, ನೀರು ಬತ್ತಿದ ಹಾಗೂ ಬರಪೀಡಿತ ಯವತ್ಮಲ್ ಜಿಲ್ಲೆಯ ಆಟೊರಿಕ್ಷಾ ಚಾಲಕರೊಬ್ಬರ ಪುತ್ರಿಯು ಮಹಾರಾಷ್ಟ್ರದ ಪ್ರಪ್ರಥಮ ಮುಸ್ಲಿಂ ಮಹಿಳಾ ಐಎಎಸ್ ಅಧಿಕಾರಿಣಿಯಾದ ಯಶೋಗಾಥೆಯಿದು.

ಅಶ್ಫಾಕ್ ಶೇಖ್ ಅವರ ಪುತ್ರಿ ಆದಿಬಾ ಅನಂ ಎಂಬ ಯುವತಿಯು ಈ ವರ್ಷದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 142ನೇ ರ್ಯಾಂಕ್ ಗಳಿಸುವ ಮೂಲಕ, ಭಾರತೀಯ ಆಡಳಿತಾತ್ಮಕ ಸೇವೆಗೆ ಸೇರ್ಪಡೆಯಾದ ಮಹಾರಾಷ್ಟ್ರದ ಪ್ರಪ್ರಥಮ ಮುಸ್ಲಿಂ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಆದಿಬಾ ಅನಂ ಅವರ ತಂದೆ ಅಶ್ಫಾಕ್ ಶೇಖ್ ಅವರು ಪರಿಸ್ಥಿತಿಯ ಒತ್ತಡದಿಂದಾಗಿ 10ನೇ ತರಗತಿಗೇ ತಮ್ಮ ವ್ಯಾಸಂಗವನ್ನು ಮೊಟಕುಗೊಳಿಸುವಂತಾದರೂ, ನನ್ನ ಪುತ್ರಿಗೂ ಇದೇ ಪರಿಸ್ಥಿತಿ ಎದುರಾಗಬಾರದು ಎಂದು ಶಪಥ ಮಾಡಿದ್ದರು. ತನ್ನ ಬಾಲ್ಯದ ದಿನಗಳಿಂದಲೇ ಓದಿನಲ್ಲಿ ಚುರುಕಿದ್ದ ಆದಿಬಾ ಅನಂಗೆ ಅಶ್ಫಾಕ್ ಶೇಖ್ ಸಾಧ್ಯವಿರುವ ಎಲ್ಲ ಸೌಲಭ್ಯಗಳು ಹಾಗೂ ಪ್ರೋತ್ಸಾಹಗಳನ್ನು ನೀಡಿದ್ದರು.

10ನೇ ತರಗತಿಯಲ್ಲಿ ಶೇ. 98ರಷ್ಟು ಅಂಕಗಳು ಹಾಗೂ 12ನೇ ತರಗತಿಯಲ್ಲಿ ವಿಜ್ಞಾನ ವಿಷಯದಲ್ಲಿ ಶೇ. 97ರಷ್ಟು ಅಂಕಗಳನ್ನು ಪಡೆದಿದ್ದ ಆದಿಬಾ, ನಂತರ ಯವತ್ಮಲ್ ನಿಂದ ಪುಣೆಗೆ ಸ್ಥಳಾಂತರಗೊಂಡು, ಗಣಿತಶಾಸ್ತ್ರದಲ್ಲಿ ತಮ್ಮ ಪದವಿ ಪೂರೈಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಆದಿಬಾ ಅನಂ, “ಪದವಿ ಪೂರೈಸಿದ ನಂತರ, ಬಹುತೇಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟತೆಯ ಕೊರತೆಗೊಳಗಾಗುತ್ತಾರೆ. ಆದರೆ, 12ನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗಲೇ ನಾನು ನಾಗರಿಕ ಸೇವಾ ಪರೀಕ್ಷೆಗಳ ಮೇಲೆ ಕಣ್ಣು ನೆಟ್ಟಿದ್ದೆ. ನಾನು ಏನಾಗಬೇಕು ಎಂಬುದು ನನಗೆ ತಿಳಿದಿತ್ತು ಹಾಗೂ ನಾನು ಆ ದಿಕ್ಕಿನಲ್ಲಿ ಕೆಲಸ ಮಾಡಿದೆ. ಸೇವಾ ಎನ್ಜಿಒನಲ್ಲಿ ಕಾರ್ಯದರ್ಶಿಯಾಗಿರುವ ನನ್ನ ಚಿಕ್ಕಪ್ಪ, ನನ್ನನ್ನು ಐಎಎಸ್ ಅಧಿಕಾರಿಗಳಿಗೆ ಪರಿಚಯಿಸಿದರು. ಹೀಗಾಗಿ, ಅವರಂತಾಗಬೇಕು ಎಂಬುದು ನನ್ನ ಆಸಕ್ತಿಯಾಯಿತು. ಐಎಎಸ್ ಅನ್ನು ನನ್ನ ಕನಸಾಗಿಸಿಕೊಂಡೆ ಹಾಗೂ ಅದನ್ನು ಸಾಧಿಸಲು ನಾನು ದಣಿವರಿಯದೆ ಕೆಲಸ ಮಾಡಿದೆ” ಎಂದು ಹೇಳಿದ್ದಾರೆ.

ಯಾವ ಹಂತದಲ್ಲೂ ಭರವಸೆ ಕಳೆದುಕೊಳ್ಳಬೇಡಿ ಎಂದು ನಾಗರಿಕ ಸೇವಾ ಪರೀಕ್ಷಾಂಕ್ಷಿಗಳಿಗೆ ಸಲಹೆ ನೀಡಿರುವ ಅವರು, ವೈಫಲ್ಯಗಳು ಜೀವನದ ಭಾಗವಾಗಿದ್ದು, ಪ್ರತಿಯೊಬ್ಬರೂ ಅದರಿಂದ ಕಲಿಯಬೇಕು ಹಾಗೂ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕು. ನಾವು ನಮ್ಮ ತಪ್ಪುಗಳಿಂದ ಪಾಠ ಕಲಿಯಬೇಕು ಹಾಗೂ ಸರಿಪಡಿಸಿಕೊಳ್ಳುವಿಕೆ ಕ್ರಮಗಳ ಮೂಲಕ ಹೊಸ ಪ್ರಯತ್ನಗಳನ್ನು ಮಾಡಬೇಕು” ಎಂದೂ ಕಿವಿಮಾತು ಹೇಳಿದ್ದಾರೆ.

ಆದಿಬಾ ಅನಂ ಅವರ ಕಿರಿಯ ಸಹೋದರರೂ ಕೂಡಾ ತಮ್ಮ ಅಕ್ಕನ ಹೆಜ್ಜೆ ಜಾಡನ್ನೇ ಅನುಸರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News