ನಟ ಶಾರೂಖ್ ಖಾನ್ ಗೆ ಜೀವ ಬೆದರಿಕೆ | ನವೆಂಬರ್ 18ರವರೆಗೆ ಆರೋಪಿ ಪೊಲೀಸರ ವಶಕ್ಕೆ
ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಗೆ ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಂಧಿತರಾಗಿರುವ ಛತ್ತೀಸ್ ಗಢದ ವಕೀಲನನ್ನು ಇಲ್ಲಿನ ನ್ಯಾಯಾಲಯವೊಂದು ನವೆಂಬರ್ 18ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಆರೋಪಿ ವಕೀಲ ಫೈಝಾನ್ ಖಾನ್ ರನ್ನು ಮಂಗಳವಾರ ಛತ್ತೀಸ್ ಗಢದ ರಾಜಧಾನಿ ರಾಯ್ಪುರದಿಂದ ಮುಂಬೈ ಪೊಲೀಸರು ಬಂಧಿಸಿದ್ದರು. ಛತ್ತೀಸ್ ಗಢದ ನ್ಯಾಯಾಲಯದಿಂದ ವರ್ಗಾವಣೆ ವಶಕ್ಕೆ ಪಡೆದ ನಂತರ, ಮುಂಬೈ ಪೊಲೀಸರು ಆತನನ್ನು ಮುಂಬೈಗೆ ಕರೆ ತಂದಿದ್ದರು.
ಆರೋಪಿ ವಕೀಲನನ್ನು ಬಾಂದ್ರಾ ನ್ಯಾಯಾಲಯದೆದುರು ಹಾಜರುಪಡಿಸಿದ ನಂತರ, ಪ್ರಕರಣದ ಕುರಿತು ತನಿಖೆ ನಡೆಸಲು ಪೊಲೀಸರು ಆತನನ್ನು ಏಳು ದಿನಗಳ ಕಾಲ ತಮ್ಮ ವಶಕ್ಕೆ ಕೋರಿದರು. ಈ ಸಂದರ್ಭದಲ್ಲಿ ಆರೋಪಿ ವಕೀಲರ ಪರ ವಕೀಲರಾದ ಅಮಿತ್ ಮಿಶ್ರಾ ಹಾಗೂ ಸುನೀಲ್ ಮಿಶ್ರಾ, ಈ ಬೆದರಿಕೆಯ ಘಟನೆ ನಡೆಯುವುದಕ್ಕೂ ಮುನ್ನ ಫೈಝಾನ್ ಖಾನ್ ಮೊಬೈಲ್ ಫೋನ್ ಕಳವಾಗಿತ್ತು ಎಂದು ವಾದ ಮಂಡಿಸಿದರು.
1994ರಲ್ಲಿ ಬಿಡುಗಡೆಯಾಗಿದ್ದ ‘ಅಂಜಾಮ್’ ಚಲನಚಿತ್ರದಲ್ಲಿನ ಕೃಷ್ಣ ಮೃಗ ಬೇಟೆ ಕುರಿತ ಶಾರೂಖ್ ಖಾನ್ ರ ಸಂಭಾಷಣೆಯ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದ ಕಾರಣಕ್ಕೆ, ಫೈಝಾನ್ ಖಾನ್ ರ ಮೊಬೈಲ್ ನಿಂದ ಬೆದರಿಕೆ ಕರೆಯ ಪಿತೂರಿಯನ್ನು ನಡೆಸಲಾಗಿದೆ ಎಂದೂ ಅವರು ವಾದಿಸಿದರು.
ಉಭಯ ವಕೀಲರ ವಾದಗಳನ್ನು ಆಲಿಸಿದ ನ್ಯಾಯಾಲಯವು, ಆರೋಪಿ ಫೈಝಾನ್ ಖಾನ್ ರನ್ನು ನವೆಂಬರ್ 18ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿತು.
ನವೆಂಬರ್ 5ರಂದು ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ, ನನಗೆ 50 ಲಕ್ಷ ರೂ.ನೀಡಬೇಕು. ಇಲ್ಲವಾದರೆ, ಶಾರೂಖ್ ಖಾನ್ ರನ್ನು ಹತ್ಯೆಗೈಯ್ಯುತ್ತೇನೆ ಎಂದು ಬೆದರಿಕೆ ಒಡ್ಡಿದ್ದ. ಶಾರೂಖ್ ಖಾನ್ ರ ನಿವಾಸ ಕೂಡಾ ಬಾಂದ್ರಾದಲ್ಲಿಯೇ ಇದೆ.
ಇದರ ಬೆನ್ನಿಗೇ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 308(ಎ) ಹಾಗೂ 351(3)(4)ರ ಅಡಿ ಅಪರಿಚಿತ ಕರೆದಾರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ಕರೆ ಮಾಡಿದ ವ್ಯಕ್ತಿ ಫೈಝಾನ್ ಖಾನ್ ಎಂದು ಗುರುತಿಸಲಾಗಿತ್ತು ಹಾಗೂ ಆತನನ್ನು ರಾಯ್ಪುರದಲ್ಲಿ ಪತ್ತೆ ಹಚ್ಚಲಾಗಿತ್ತು.
ತಮ್ಮ ಬಂಧನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಫೈಝಾನ್ ಖಾನ್, ನವೆಂಬರ್ 2ರಂದು ನನ್ನ ಮೊಬೈಲ್ ಫೋನ್ ಕಳುವಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ ಎಂದು ತಿಳಿಸಿದ್ದರು.
ಶಾರೂಖ್ ಖಾನ್ ಚಲನಚಿತ್ರದ ಕುರಿತು ತಾವು ವ್ಯಕ್ತಪಡಿಸಿದ್ದ ಆಕ್ಷೇಪದ ಕುರಿತು ಪ್ರತಿಕ್ರಿಯಿಸಿದ್ದ ಫೈಝಾನ್ ಖಾನ್, “ನಾನು ರಾಜಸ್ಥಾನ ಮೂಲದವನಾಗಿದ್ದು, ನನಗೆ ಬಿಷ್ಣೋಯಿ ಸಮುದಾಯದ ಸ್ನೇಹಿತನಿದ್ದಾನೆ. ಅವರ ಧರ್ಮದಲ್ಲಿ ಕೃಷ್ಣ ಮೃಗವನ್ನು ರಕ್ಷಣೆ ಮಾಡಬೇಕಿದೆ. ಹೀಗಾಗಿ, ನಾನು ಮುಸ್ಲಿಮನಾಗಿಯೂ ಕೃಷ್ಣ ಮೃಗದ ಬಗ್ಗೆ ಆ ರೀತಿ ಮಾತನಾಡುವುದು ಖಂಡನಾರ್ಹ ಎಂದು ಹೇಳುತ್ತೇನೆ. ಹೀಗಾಗಿಯೇ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ” ಎಂದು ಸ್ಪಷ್ಟನೆ ನೀಡಿದ್ದರು.
ಮತ್ತೊಬ್ಬ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಗುಂಪಿನಿಂದ ಸರಣಿ ಬೆದರಿಕೆ ಕರೆಗಳು ಬರುತ್ತಿರುವ ಹೊತ್ತಿನಲ್ಲೇ 59 ವರ್ಷದ ಸೂಪರ್ ಸ್ಟಾರ್ ಶಾರೂಖ್ ಖಾನ್ ಗೂ ಬೆದರಿಕೆ ಕರೆ ಬಂದಿದೆ.