ದಿಲ್ಲಿ ಚಲೋ 2.0 | ಇನ್ನೋರ್ವ ರೈತ ಮೃತ್ಯು ; ಈಗಿನ ಪ್ರತಿಭಟನೆಯಲ್ಲಿ 5ನೇ ಸಾವು
ಬಠಿಂಡಾ (ಪಂಜಾಬ್): ಖನೌರಿ ಗಡಿಯಲ್ಲಿ ಇನ್ನೋರ್ವ ಪ್ರತಿಭಟನಾನಿರತ ಮೃತಪಟ್ಟಿದ್ದು,ಇದರೊಂದಿಗೆ ಈಗ ನಡೆಯುತ್ತಿರುವ ದಿಲ್ಲಿ ಚಲೋ ಆಂದೋಲನದ ಸಂದರ್ಭದಲ್ಲಿ ಮೃತರ ಸಂಖ್ಯೆ ಐದಕ್ಕೇರಿದೆ. ಬಠಿಂಡಾ ಜಿಲ್ಲೆಯ ಅಮರಗಡ ಗ್ರಾಮದ ದರ್ಶನ ಸಿಂಗ್ (62) ಮೃತ ರೈತರಾಗಿದ್ದು, ಅವರು ಫೆ.13ರಿಂದಲೂ ಖನೌರಿ ಗಡಿಯಲ್ಲಿ ಬೀಡು ಬಿಟ್ಟಿದ್ದರು.
ಸಿಂಗ್ ಕುಟುಂಬವು ಸುಮಾರು ಎಂಟು ಎಕರೆ ಜಮೀನಿನ ಜೊತೆಗೆ ಎಂಟು ಲಕ್ಷ ರೂ.ಗಳ ಸಾಲದ ಹೊರೆಯನ್ನೂ ಹೊಂದಿದೆ. ಸಿಂಗ್ ತಿಂಗಳ ಹಿಂದಷ್ಟೇ ತನ್ನ ಪುತ್ರನ ಮದುವೆಯನ್ನು ನೆರವೇರಿಸಿದ್ದರು.
ಸಿಂಗ್ ಸಾವಿಗೆ ಸಂತಾಪವನ್ನು ಸೂಚಿಸಿರುವ ರೈತ ಸಂಘಟನೆ ಬಿಕೆಯು ಏಕತಾ ಸಿಧುಪುರ ಮೃತರ ಕುಟುಂಬಕ್ಕೆ ಪರಿಹಾರಕ್ಕಾಗಿ ಆಗ್ರಹಿಸಿದೆ. ಗಡಿಗಳಲ್ಲಿ ಇನ್ನಷ್ಟು ರೈತರ ಸಾವುಗಳನ್ನು ತಡೆಯಲು ಸರಕಾರವು ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು ಎಂದು ಸಂಘಟನೆಯ ಬಠಿಂಡಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶಮ್ ಸಿಂಗ್ ಹೇಳಿದರು.
ಸಿಂಗ್ ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಪ್ರತಿಭಟನಾ ಸ್ಥಳದಲ್ಲಿ ಕುಸಿದು ಬಿದ್ದು ಪ್ರಜ್ಞಾಹೀನರಾಗಿದ್ದರು. ಅವರನ್ನು ತಕ್ಷಣವೇ ಸಮೀಪದ ಪತ್ರನ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿತ್ತು. ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಪಟಿಯಾಲಾದ ಸರಕಾರಿ ರಾಜಿಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು ಮತ್ತು ಅಲ್ಲಿಯ ವೈದ್ಯರು ಸಿಂಗ್ ಮಿದುಳು ಸ್ರಾವದಿಂದ ಸಾವಿಗೀಡಾಗಿದ್ದಾರೆ ಎಂದು ಘೋಷಿಸಿದರು ಎಂದು ಕುಟುಂಬ ಸದಸ್ಯರು ತಿಳಿಸಿದರು.