ದೆಹಲಿ: ಐಎಎಸ್ ಕೋಚಿಂಗ್ ಸೆಂಟರ್ ಗ್ರಂಥಾಲಯಕ್ಕೆ ನುಗ್ಗಿದ ನೀರು; ಮೂವರು ವಿದ್ಯಾರ್ಥಿಗಳು ಜಲಸಮಾಧಿ
ಹೊಸದಿಲ್ಲಿ: ಕೇಂದ್ರ ದೆಹಲಿಯ ಹಳೆ ರಾಜೇಂದ್ರ ನಗರ ಪ್ರದೇಶದಲ್ಲಿದ್ದ ಐಎಎಎಸ್ ಕೋಚಿಂಗ್ ಸೆಂಟರ್ ಗೆ ನೀರು ನುಗ್ಗಿ ಸಂಭವಿಸಿದ ಭೀಕರ ದುರಂತದಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ರಸ್ತೆಯಲ್ಲಿನ ಪ್ರವಾಹ ನೀರು ಈ ಕೋಚಿಂಗ್ ಸೆಂಟರ್ ನ ಬೇಸ್ ಮೆಂಟ್ ನಲ್ಲಿರುವ ಗ್ರಂಥಾಲಯಕ್ಕೆ ಶನಿವಾರ ಸಂಜೆ ನುಗ್ಗಿ ಈ ದುರಂತ ಸಂಭವಿಸಿದೆ. ಮೃತರ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಸೇರಿದ್ದಾರೆ.
ಕೋಚಿಂಗ್ ಸೆಂಟರ್ ನಲ್ಲಿ ಒಟ್ಟು 30 ಮಂದಿ ವಿದ್ಯಾರ್ಥಿಗಳಿದ್ದು, ಸಿಲುಕಿಕೊಂಡಿದ್ದ 27 ವಿದ್ಯಾರ್ಥಿಗಳು ತಪ್ಪಿಸಿಕೊಂಡಿದ್ದಾರೆ ಅಥವಾ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆ ತರಲಾಗಿದೆ.
ರಾಷ್ಟ್ರೀಯ ವಿಕೋಪ ಪರಿಹಾರ ಪಡೆ ಮತ್ತು ಅಗ್ನಿಶಾಮಕ ದಳ, ಪೊಲೀಸರು ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಮಿಂಚಿನ ಕಾರ್ಯಾಚರಣೆ ನಡೆಸಿದರು. ರಾತ್ರಿ 10.30ರ ವೇಳೆಗೆ ಅಧಿಕಾರಿಗಳು ಮೊದಲ ಸಾವನ್ನು ದೃಢಪಡಿಸಿದರು. ಎನ್ ಡಿಆರ್ಎಫ್ ಮುಳುಗುತಜ್ಞರು ವಿದ್ಯಾರ್ಥಿನಿಯ ಮೃತದೇಹವನ್ನು ಹೊರತೆಗೆದರು. ಮತ್ತೊಬ್ಬ ವಿದ್ಯಾರ್ಥಿನಿಯ ಮೃತದೇಹ ರಾತ್ರಿ 11.15ರ ವೇಳೆಗೆ ಲಭ್ಯವಾಗಿದೆ. ಮಧ್ಯರಾತ್ರಿ ಬಳಿಕ ಮುಳುಗು ತಜ್ಞರು ಮತ್ತೊಂದು ಮೃತದೇಹವನ್ನು ಪತ್ತೆ ಮಾಡಿದರು. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ಗಳಡಿ ಪೊಲೀಸರು ನಿರ್ಲಕ್ಷ್ಯಯದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.
ರಾಜೇಂದ್ರ ನಗರದ ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್ ನ ಬೇಸ್ ಮೆಂಟ್ ಗೆ ಶನಿವಾರ ರಸ್ತೆಯಿಂದ ನೀರು ನುಗ್ಗಿ ಕಟ್ಟಡ ಜಲಾವೃತವಾಗಿದ್ದು, ಇದು ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದಲ್ಲದೇ, ಮೃತದೇಹಗಳನ್ನು ಹೊರತೆಗೆಯಲು ಮುಳುಗು ತಜ್ಞರ ನೆರವನ್ನೂ ಪಡೆಯಬೇಕಾಯಿತು. ಈ ಭಯಾನಕ ಪರಿಸ್ಥಿತಿಯನ್ನು ಬಣ್ಣಿಸಿದ ವಿದ್ಯಾರ್ಥಿಗಳು, ಹೀಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ ಕಲ್ಪನೆಯೂ ನಮಗಿರಲಿಲ್ಲ ಎಂದು ಹೇಳಿದ್ದಾರೆ. ಕಳೆದ ವಾರ ಕೂಡಾ ಸೊಂಟ ಮಟ್ಟದವರೆಗೆ ಮಳೆ ನೀರು ನಿಂತಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
"ಕೋಚಿಂಗ್ ಸೆಂಟರ್ ನ ಮುಖ್ಯ ಗೇಟ್ ಮಳೆನೀರಿನ ರಭಸಕ್ಕೆ ಕುಸಿದು ಬಿದ್ದು, ನೀರು ಗ್ರಂಥಾಲಯವಿದ್ದ ಬೇಸ್ ಮೆಂಟ್ ಗೆ ನುಗ್ಗಿದೆ. ವೇಗವಾಗಿ ಒಂದು ಕಾರು ಚಲಿಸಿದ್ದರಿಂದ ನೀರು ಬೇಸ್ ಮೆಂಟ್ ಗೆ ಹರಿಯಿತು ಎಂದು ಕೆಲ ವಿದ್ಯಾರ್ಥಿಗಳು ಹೇಳಿದ್ದಾರೆ" ಎಂದು ಯುಪಿಎಸ್ಸಿ ಆಕಾಂಕ್ಷಿ ರಾಹುಲ್ ಪವಾರ್ (29) ವಿವರಿಸಿದ್ದಾರೆ. ಭಾರೀ ಮಳೆಯಿಂದಾಗಿ ಹೊರ ಹೋಗಲಾರದೇ ಕೆಲವು ಮಂದಿ ವಿದ್ಯಾರ್ಥಿಗಳು ಕೇಂದ್ರದಲ್ಲೇ ಸಿಕ್ಕಿಹಾಕಿಕೊಂಡಿದ್ದರು ಎಂದು ಮತ್ತೊಬ್ಬ ವಿದ್ಯಾರ್ಥಿ ವಿವರ ನೀಡಿದ್ದಾರೆ.