ದಿಲ್ಲಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ; ದಿಲ್ಲಿ ಸರಕಾರ ಕಟ್ಟೆಚ್ಚರ
ಹೊಸದಿಲ್ಲಿ: ಹರ್ಯಾಣದ ಹತ್ನಿಕುಂಡ್ ಬ್ಯಾರೇಜ್ನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಯಮುನಾ ನದಿಯ ನೀರಿನ ಮಟ್ಟ ದಿಲ್ಲಿಯಲ್ಲಿ ಮತ್ತೆ ಅಪಾಯದ ಗಡಿ ದಾಟಿದೆ.
ಇಂದು ಬೆಳಗ್ಗೆ 9 ಗಂಟೆಗೆ ನದಿಯಲ್ಲಿ 205.96 ಮೀಟರ್ ಗಳಷ್ಟು ನೀರು ಹರಿಯುತ್ತಿದೆ. ಸಂಜೆ ವೇಳೆಗೆ ಇದು 206.7 ಮೀಟರ್ ಗೆ ಏರುವ ನಿರೀಕ್ಷೆಯಿದೆ.
ಹರ್ಯಾಣದಿಂದ 2 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ.
ಅರವಿಂದ ಕೇಜ್ರಿವಾಲ್ ಸರಕಾರವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸಚಿವೆ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ನಿನ್ನೆ ಹೇಳಿದ್ದಾರೆ.
ಯಮುನಾ ನದಿಯು ಈಗ ಒಂದು ವಾರದಿಂದ ಉಕ್ಕಿ ಹರಿಯುತ್ತಿದೆ, ಇದು ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಹರ್ಯಾಣ ಬ್ಯಾರೇಜ್ ನಿಂದನೀರು ಬಿಡುವುದೇ ನೀರಿನ ಮಟ್ಟದಲ್ಲಿ ನಿರಂತರ ಏರಿಕೆಗೆ ಪ್ರಮುಖ ಕಾರಣ.
ಹಿಮಾಚಲದಲ್ಲಿ ಮಾನ್ಸೂನ್ ಬಿರುಸಿನ ಹಿನ್ನೆಲೆಯಲ್ಲಿ ಬ್ಯಾರೇಜ್ಗೆ ಭಾರಿ ಪ್ರಮಾಣದ ನೀರು ಬಂದಿದೆ.
ನೀರಿನ ಮಟ್ಟ 206.7 ಮೀಟರ್ ಗಿಂತ ಹೆಚ್ಚಾದರೆ ಯಮುನಾ ಖಾದರ್ ನ ಕೆಲವು ಭಾಗಗಳು ಪ್ರವಾಹಕ್ಕೆ ಒಳಗಾಗಬಹುದು.
"ಈ ಪ್ರದೇಶಗಳಲ್ಲಿ ತಕ್ಷಣದ ಸ್ಥಳಾಂತರಿಸುವಿಕೆಯನ್ನು ಕೈಗೊಳ್ಳಲು ಸರಕಾರವು ಸಂಪೂರ್ಣವಾಗಿ ಸಿದ್ಧವಾಗಿದೆ" ಎಂದು ಅತಿಶಿ ಹೇಳಿದರು.
ಪ್ರವಾಹದ ಅಪಾಯವಿರುವ ಪ್ರದೇಶಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು ನಿಯಮಿತವಾಗಿ ಘೋಷಣೆಗಳನ್ನು ಮಾಡಲಾಗುತ್ತಿದೆ.