ಮಮತಾ ವಿರುದ್ಧ ಅವಹೇಳನಕಾರಿ, ಸ್ತ್ರೀದ್ವೇಷದ ಹೇಳಿಕೆ: ನಿವೃತ್ತ ನ್ಯಾಯಮೂರ್ತಿ ವಿರುದ್ಧ ದೂರು
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ "ಆಕೆಯ ಬೆಲೆ ಎಷ್ಟು" ಹಾಗೂ "ಆಕೆ ನಿಜವಾಗಿಯೂ ಮಹಿಳೆಯೇ" ಎಂಬ ಅತ್ಯಂತ ಅವಹೇಳನಕಾರಿ ಹಾಗೂ ಸ್ತ್ರೀದ್ವೇಷದ ಹೇಳಿಕೆ ನೀಡಿದ ಅರೋಪದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಬಿಜೆಪಿಯ ತಮ್ಲುಕ್ ಕ್ಷೇತ್ರದ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
"ಬಿಜೆಪಿಯ ಸಂದೇಶ್ಖಾಲಿ ಅಭ್ಯರ್ಥಿ ರೇಖಾ ಪಾತ್ರ ಅವರನ್ನು ಎರಡು ಸಾವಿರ ರೂಪಾಯಿಗೆ ಬಿಜೆಪಿ ಖರೀದಿಸಿದೆ ಎಂದು ತೃಣಮೂಲ ಹೇಳುತ್ತಿದೆ. ಆದ್ದರಿಂದ ಮಮತಾ ಬ್ಯಾನರ್ಜಿಯವರೇ, ನಿಮ್ಮ ಬೆಲೆ ಎಷ್ಟು, 10 ಲಕ್ಷವೇ?" ಎಂದು ಪೂರ್ವ ಮಿಡ್ನಾಪುರದ ಚೈತನ್ಯಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಗಂಗೋಪಾಧ್ಯಾಯ ಪ್ರಶ್ನಿಸಿದ್ದರು ಎಂದು ವರದಿಯಾಗಿತ್ತು.
ಇದನ್ನು ಟಿಎಂಸಿ ಕಟುವಾಗಿ ಟೀಕಿಸಿದ್ದು, "ಇಂಥ ಅವಹೇಳನಕಾರಿ ಶಬ್ದ ಆರಿಸಿಕೊಳ್ಳುವ ಮೂಲಕ ಅವರು ಸಭ್ಯತೆಯ ಎಲ್ಲ ಎಲ್ಲೆಗಳನ್ನು ಮೀರಿದ್ದಾರೆ. ಜನ ನಿಮ್ಮನ್ನು ಮನುಷ್ಯ ಎಂದು ಗೌರವಿಸುವುದನ್ನೇ ನಿಲ್ಲಿಸಿದ್ದಾರೆ. ಸಭ್ಯ ವ್ಯಕ್ತಿಯೊಬ್ಬರ ವಿರುದ್ಧ ಅಂಥ ಹೇಳಿಕೆ ನೀಡುತ್ತೀರಿ ಎಂದು ನಂಬಲೂ ಸಾಧ್ಯವಿಲ್ಲ" ಎಂದು ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ.
ಆದರೆ ಪಕ್ಕದ ಹಲ್ದಿಯಾದಲ್ಲಿ ಪ್ರಚಾರಸಭೆ ನಡೆಸಿದ ಮಮತಾ ಬ್ಯಾನರ್ಜಿ ತಮ್ಮ 36 ನಿಮಿಷಗಳ ಭಾಷಣದಲ್ಲಿ ಎಲ್ಲೂ ಗಂಗೋಪಾಧ್ಯಾಯ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ.