12ನೇ ತರಗತಿಯ ಕಲಾ, ವಾಣಿಜ್ಯ ವಿದ್ಯಾರ್ಥಿಗಳಿಗೂ ಪೈಲಟ್ ಆಗಲು ಅವಕಾಶ : ಡಿಜಿಸಿಎ ಚಿಂತನೆ

Update: 2025-04-18 07:17 IST
12ನೇ ತರಗತಿಯ ಕಲಾ, ವಾಣಿಜ್ಯ ವಿದ್ಯಾರ್ಥಿಗಳಿಗೂ ಪೈಲಟ್ ಆಗಲು ಅವಕಾಶ : ಡಿಜಿಸಿಎ ಚಿಂತನೆ

ಸಾಂದರ್ಭಿಕ ಚಿತ್ರ | Photo: PTI

  • whatsapp icon

ಹೊಸದಿಲ್ಲಿ : ಕಲಾ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಉತ್ತೀರ್ಣರಾಗುವ 12ನೇ ತರಗತಿ ವಿದ್ಯಾರ್ಥಿಗಳಿಗೂ ಪೈಲಟ್ ತರಬೇತಿ ಪಡೆಯಲು ಅವಕಾಶ ಮಾಡಿಕೊಡಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮುಂದಾಗಿದೆ. ಪ್ರಸ್ತುತ ಕಮರ್ಷಿಯಲ್ ಪೈಲಟ್ ಲೈಸನ್ಸ್ ತರಬೇತಿ ಪಡೆಯಲು 12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಧ್ಯಯನ ಮಾಡುವುದು ಅಗತ್ಯ. ಆದಾಗ್ಯೂ ವೈದ್ಯಕೀಯ ಫಿಟ್ನೆಸ್ ಮಾನದಂಡ ಎಲ್ಲರಿಗೂ ಒಂದೇ ಆಗಿರುತ್ತದೆ.

ಭಾರತದಲ್ಲಿ 1990ರ ದಶಕದಿಂದಲೂ ಕಮರ್ಷಿಯಲ್ ಪೈಲಟ್ ಲೈಸನ್ಸ್ (ಸಿಪಿಎಲ್) ತರಬೇತಿ ಕ್ಷೇತ್ರವು ಕೇವಲ ವಿಜ್ಞಾನ ಮತ್ತು ಗಣಿತ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿದೆ. ಇದಕ್ಕೂ ಮುನ್ನ ಸಿಪಿಎಲ್ ತರಬೇತಿಗೆ 10ನೇ ತರಗತಿ ಉತ್ತೀರ್ಣವಾಗುವುದು ಮಾನದಂಡವಾಗಿತ್ತು.

"ಈ ನಿರ್ಧಾರ ಅಂತಿಮವಾದ ಬಳಿಕ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಶಿಫಾರಸ್ಸು ಕಳುಹಿಸಲಾಗುವುದು. ಅಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಸಿಪಿಎಲ್ ತರಬೇತಿಯು ಎಲ್ಲ ವಿಷಯಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಲಿದೆ" ಎಂದು ಡಿಜಿಸಿಎ ಮೂಲಗಳು ಹೇಳಿವೆ.

"ಭಾರತ ಹೊರತುಪಡಿಸಿದರೆ ವಿಶ್ವದ ಯಾವುದೇ ದೇಶಗಳಲ್ಲಿ ಸಿಪಿಎಲ್ ತರಬೇತಿಗೆ 12ನೇ ತರಗತಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಕಲಿತಿರಬೇಕು ಎಂಬ ಮಾನದಂಡ ಇಲ್ಲ. ಇದು ಹಿಂದಿನ ಕಾಲದಿಂದ ಬಂದ ಅಗತ್ಯತೆ. ಪೈಲಟ್‍ಗಳಿಗೆ 12ನೇ ತರಗತಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಕಲಿಯಬೇಕಾದ ಅಗತ್ಯ ಇಲ್ಲ. ಅದಕ್ಕೂ ಕಿರಿಯ ತರಗತಿಗಳಲ್ಲಿ ಅಗತ್ಯ ಜ್ಞಾನವನ್ನು ಅವರು ಸಂಪಾದಿಸಿರುತ್ತಾರೆ" ಎಂದು ಇಂಡಿಗೊ ವಿಮಾನ ಕಾರ್ಯಾಚರಣೆ ವಿಭಾಗದ ನಿವೃತ್ತ ಉಪಾಧ್ಯಕ್ಷ, ಹಿರಿಯ ಪೈಲಟ್ ಕ್ಯಾಪ್ಟನ್ ಶಕ್ತಿ ಲುಂಬಾ ಪ್ರತಿಕ್ರಿಯಿಸಿದ್ದಾರೆ. ಹಲವು ವಿಮಾನಯಾನ ಶಾಲೆಗಳು ಕೂಡಾ ಪ್ರಸ್ತುತ ನಿಯಮಾವಳಿಯನ್ನು ಪ್ರಶ್ನಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News