ಬಲಪಂಥೀಯರ ಆಕ್ರೋಶ | ಇನ್ಸ್ಟಾಗ್ರಾಮ್‌ ನಲ್ಲಿ ಧ್ರುವ್ ರಾಠಿಯನ್ನು ಅನ್‌ ಫಾಲೋ ಮಾಡಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

Update: 2024-05-15 17:56 GMT

  Indian cricketer Shreyas Iyer and YouTuber Dhruv Rathee | PC: @JaikyYadav16/X

ಹೊಸದಿಲ್ಲಿ: ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಹಿಂಬಾಲಿಸಿದ್ದ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್, ಸಾಮಾಜಿಕ ಮಾಧ್ಯಮಗಳಲ್ಲಿ ಬಲಪಂಥೀಯರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಇನ್ಸ್ಟಾಗ್ರಾಮ್‌ ನಲ್ಲಿ ಅನ್‌ ಫಾಲೋ ಮಾಡಿರುವ ಘಟನೆ ವರದಿಯಾಗಿದೆ.

ವರದಿಗಳ ಪ್ರಕಾರ, ಮಂಗಳವಾರ ರಾತ್ರಿ 10 ಗಂಟೆಯವರೆಗೂ ಧ್ರುವ್ ರಾಠಿ ಅವರನ್ನು ಶ್ರೇಯಸ್ ಅಯ್ಯರ್ ಫಾಲೋ ಮಾಡುತ್ತಿದ್ದರು. ಇದನ್ನು ಗಮನಿಸಿದ ಬಳಕೆದಾರರೊಬ್ಬರು, ಧ್ರುವ್ ರಾಠಿಯನ್ನು ಫಾಲೋ ಮಾಡುತ್ತಿರುವವರ ಪೈಕಿ ಶ್ರೇಯಸ್ ಅಯ್ಯರ್ ಇರುವುದನ್ನು ಗಮನಿಸಿ, ಅವರ ವೈಯಕ್ತಿಕ ವಿವರಗಳ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ಬಳಿಕ ಈ ಸ್ಕ್ರೀನ್ ಶಾಟ್ ಜೊತೆಗೆ, ಶ್ರೇಯಸ್ ಅಯ್ಯರ್ ಹಾಗೂ ಧ್ರುವ್ ರಾಠಿ ಇಬ್ಬರನ್ನೂ ಲಗತ್ತಿಸಿ, ರಾತ್ರಿ 10.30ರ ಹೊತ್ತಿಗೆ ಪೋಸ್ಟ್ ಮಾಡಿದ್ದಾರೆ. ಕೂಡಲೇ ಆ ಪೋಸ್ಟ್ ವೈರಲ್ ಆಗಿದ್ದು, ಶ್ರೇಯಸ್ ಅಯ್ಯರ್ ವಿರುದ್ಧ ಬಲಪಂಥೀಯ ಬಳಕೆದಾರರು ದ್ವೇಷದ ಅಭಿಯಾನಕ್ಕೆ ಕಿಡಿ ಹಚ್ಚಿದರು ಎಂದು ಹೇಳಲಾಗಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಓರ್ವ ಬಳಕೆದಾರರು, "ಧ್ರುವ್ ರಾಠಿಯನ್ನು ಶ್ರೇಯಸ್ ಅಯ್ಯರ್ ಹಿಂಬಾಲಿಸುತ್ತಿರುವ ಸ್ವವಿವರದ ಸ್ಕ್ರೀನ್ ಶಾಟ್ ಅನ್ನು ನಾನು ಸುಮಾರು ರಾತ್ರಿ 10 ಗಂಟೆಯಲ್ಲಿ ತೆಗೆದೆ. ಶ್ರೇಯಸ್ ಅಯ್ಯರ್ ಹಾಗೂ ಧ್ರುವ್ ರಾಠಿ ಇಬ್ಬರನ್ನೂ ಲಗತ್ತಿಸಿ, ಆ ಚಿತ್ರವನ್ನು ರಾತ್ರಿ ಸುಮಾರು 10.30 ಗಂಟೆಗೆ ಪೋಸ್ಟ್ ಮಾಡಿದೆ. ಅದು ಕೆಲವೇ ಗಂಟೆಗಳಲ್ಲಿ ವೈರಲ್ ಆಯಿತು. ನಾನು ಬೆಳಗ್ಗೆ ಎದ್ದು ನೋಡಿದಾಗ, ಇದಕ್ಕೂ ಮುನ್ನ 599 ಮಂದಿಯನ್ನು ಹಿಂಬಾಲಿಸುತ್ತಿದ್ದ ಶ್ರೇಯಸ್ ಅಯ್ಯರ್, ಆಗ 597 ಮಂದಿಯನ್ನು ಫಾಲೋ ಮಾಡುತ್ತಿದ್ದರು. ಅವರು ಧ್ರುವ್ ರಾಠಿಯನ್ನು ಫಾಲೋ ಮಾಡುವುದನ್ನು ನಿಲ್ಲಿಸಿದ್ದರು" ಎಂದು ಬರೆದುಕೊಂಡಿದ್ದಾರೆ.

ಧ್ರುವ್ ರಾಠಿ ಸಾಮಾಜಿಕ, ರಾಜಕೀಯ ಪರಿಸರದಂತಹ ವೈವಿಧ್ಯಮಯ ವಿಷಯಗಳನ್ನು ಕುರಿತ ತಮ್ಮ ಮಾಹಿತಿಪೂರ್ಣ ವಿಡಿಯೊಗಳಿಗೆ ಖ್ಯಾತರಾಗಿದ್ದಾರೆ. ಅವರ ವಿಡಿಯೊಗಳು ಹಿಂದಿ ಭಾಷೆಯಲ್ಲಿರುತ್ತವೆ. ಅವರ ವಿಡಿಯೊಗಳು ಪದೇ ಪದೇ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನೀತಿಗಳು ಹಾಗೂ ಕೃತ್ಯಗಳನ್ನು ಟೀಕಿಸುವುದರಿಂದ, ಅವರಿಗೆ ಈ ವಿಡಿಯೊಗಳು ದೊಡ್ಡ ಪ್ರಮಾಣದ ವೀಕ್ಷಕರು ಹಾಗೂ ಗಮನಾರ್ಹ ಪ್ರಮಾಣದ ಟೀಕಾಕಾರರಿಬ್ಬರನ್ನೂ ಒದಗಿಸಿಕೊಟ್ಟಿವೆ.

ನಿರ್ದಿಷ್ಟವಾಗಿ ಬಿಜೆಪಿ ಬೆಂಬಲಿಗರು ಧ್ರುವ್ ರಾಠಿಯ ವಿರುದ್ಧ ಮೌಖಿಕ ದಾಳಿ ನಡೆಸುತ್ತಿದ್ದು, ಅವರು ಜರ್ಮನಿಯಲ್ಲಿ ವಾಸ ಮಾಡುತ್ತಿರುವುದರಿಂದ, ಅವರ ಗ್ರಹಿಕೆಗಳನ್ನು ಪ್ರಶ್ನಿಸುತ್ತಿದ್ದಾರೆ.

ಇದುವರೆಗೆ ಈ ವಿಷಯದ ಕುರಿತು ಶ್ರೇಯಸ್ ಅಯ್ಯರ್ ಆಗಲಿ ಅಥವಾ ಧ್ರುವ್ ರಾಠಿಯಾಗಲಿ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಘಟನೆಯು ಅವರಿಬ್ಬರ ಫಾಲೋವರ್ಸ್ ಹಾಗೂ ಸಾರ್ವಜನಿಕರ ನಡುವೆ ಚರ್ಚೆಯ ಕೇಂದ್ರ ಬಿಂದುವಾಗಿ ಬದಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News