ಕಮಲ್ ಹಾಸನ್ ಪಕ್ಷದೊಂದಿಗೆ ಮೈತ್ರಿಯನ್ನು ಡಿಎಂಕೆ ನಿರ್ಧರಿಸಲಿದೆ: ಉದಯನಿಧಿ ಸ್ಟಾಲಿನ್
ಹೊಸದಿಲ್ಲಿ : ನಟ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಮ್ (ಎಂಎನ್ಎಂ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚುನಾವಣೆ ಸಂದರ್ಭ ಡಿಎಂಕೆ ನಾಯಕರು ನಿರ್ಧರಿಸಲಿದ್ದಾರೆ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಶನಿವಾರ ಹೇಳಿದ್ದಾರೆ.
ತಮಿಳುನಾಡು ನಗರ ವಸತಿ ಪ್ರದೇಶಗಳ ಅಭಿವೃದ್ಧಿ ಮಂಡಳಿ ಪರವಾಗಿ ಕೊಟ್ಟೂರ್ಪುರಂ ಯೋಜನಾ ಪ್ರದೇಶದಲ್ಲಿ 1800 ನೂತನ ಫ್ಲಾಟ್ ಗಳಿಗೆ ಶಂಕು ಸ್ಥಾಪನೆ ನರೆವೇರಿಸುವ ಸಂದರ್ಭ ಉದಯನಿಧಿ ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ. ‘ಸನಾತನ ಧರ್ಮ’ದ ಹೇಳಿಕೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೋಟಿಸಿಗೆ ಪ್ರತಿಕ್ರಿಯಿಸಿದ ಅವರು, ‘‘ಸುಪ್ರೀಂ ಕೋರ್ಟ್ ಆದೇಶವನ್ನು ನಾನು ಮಾಧ್ಯಮದಲ್ಲಿ ನೋಡಿದೆ. ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ನಿಂದ ನನಗೆ ಇದುವರೆಗೆ ಯಾವುದೇ ನೋಟಿಸು ಬಂದಿಲ್ಲ. ನೋಟಿಸು ಸ್ವೀಕರಿಸಿದ ಬಳಿಕ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇನೆ’’ ಎಂದಿದ್ದಾರೆ.
‘ಸನಾತನ ಧರ್ಮ’ವನ್ನು ನಿರ್ಮೂಲನೆಗೊಳಿಸಬೇಕು ಎಂದು ಹೇಳಿಕೆ ನೀಡಿರುವುದಕ್ಕೆ ತಮಿಳುನಾಡು ಸರಕಾರ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸು ಜಾರಿ ಮಾಡಿತ್ತು. ಎಡಿಎಂಕೆ-ಬಿಜೆಪಿ ಮೈತ್ರಿ ಕುರಿತಂತೆ ಮಾತನಾಡಿದ ಅವರು, ಇದು ಪಕ್ಷದ ಆಂತರಿಕ ವಿಷಯ. ಆದರೆ, ನಾನು ಈ ಎರಡು ಪಕ್ಷವನ್ನು ಬೇರೆ ಬೇರೆ ಎಂದು ಭಾವಿಸಲಾರೆ. ಒಂದೇ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.