ಪಹಲ್ಗಾಮ್ ದಾಳಿಯ ಪಾತಕಿಗಳಿಗಾಗಿ ತೀವ್ರಗೊಂಡ ಶೋಧ
ಜಮ್ಮುಕಾಶ್ಮೀರ ಸಿಎಂ ಉಮರ್ ಅಬ್ದುಲ್ಲಾ - Photo | ANI
ಹೊಸದಿಲ್ಲಿ: 26 ಜೀವಗಳನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ರವಿವಾರ ಭಯೋತ್ಪಾದನೆ ಮತ್ತು ಅದರ ಮೂಲದ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಕರೆ ನೀಡಿದ್ದಾರೆ.
ತಪ್ಪಿತಸ್ಥರನ್ನು ಶಿಕ್ಷಿಸುವಾಗ ಅಮಾಯಕ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಬ್ದುಲ್ಲಾ ಎಕ್ಸ್ ಪೋಸ್ಟ್ನಲ್ಲಿ ಆಗ್ರಹಿಸಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಭಯೋತ್ಪಾದನೆ ಮತ್ತು ಅದರ ಮೂಲದ ವಿರುದ್ಧ ನಿರ್ಣಾಯಕ ಹೋರಾಟ ನಡೆಯಲೇಬೇಕಿದೆ. ಕಾಶ್ಮೀರದ ಜನರು ಭಯೋತ್ಪಾದನೆ ಮತ್ತು ಅಮಾಯಕ ಜನರ ಕಗ್ಗೊಲೆಯನ್ನು ಬಹಿರಂಗವಾಗಿ ಖಂಡಿಸಿದ್ದಾರೆ. ಇದನ್ನು ಅವರು ಮುಕ್ತವಾಗಿ ಮತ್ತು ಸ್ವಯಂಪ್ರೇರಿತರಾಗಿ ಮಾಡಿದ್ದಾರೆ. ಈ ಬೆಂಬಲವನ್ನು ಬಳಸಿಕೊಳ್ಳಲು ಮತ್ತು ಜನರನ್ನು ದೂರವಿಡುವ ಯಾವುದೇ ತಪ್ಪುಕ್ರಮಗಳನ್ನು ತಪ್ಪಿಸಲು ಇದು ಸಕಾಲವಾಗಿದೆ ಎಂದು ಉಮರ್ ತನ್ನ ಪೋಸ್ಟ್ನಲ್ಲಿ ಹೇಳಿದ್ದಾರೆ.
ತಪ್ಪಿತಸ್ಥರನ್ನು ಶಿಕ್ಷಿಸಿ,ಅವರಿಗೆ ಯಾವುದೇ ಕರುಣೆಯನ್ನು ತೋರಿಸಬೇಡಿ. ಆದರೆ ಅಮಾಯಕರಿಗೆ ತೊಂದರೆಯಾಗಲು ಬಿಡಬೇಡಿ ಎಂದು ಅವರು ಆಗ್ರಹಿಸಿದ್ದಾರೆ.
ದಾಳಿಯ ಬಳಿಕ ಅಬ್ದುಲ್ಲಾ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುವ ಮೂಲಕ ವಿವಿಧ ಪಕ್ಷಗಳ ನಾಯಕರು ರಾಜಕೀಯ ಒಗ್ಗಟ್ಟನ್ನು ಪ್ರದರ್ಶಿಸಿದ್ದರು.
ಪಹಲ್ಗಾಮ್ ದಾಳಿಯ ಕುರಿತು ಯಾವುದೇ ‘ತಟಸ್ಥ ಮತ್ತು ಪಾರರ್ಶಕ’ ತನಿಖೆಗೆ ಸಹಕರಿಸಲು ತಾನು ಸಿದ್ಧ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಅಬ್ದುಲ್ಲಾ ಶನಿವಾರ ಪ್ರಶ್ನಿಸಿದ್ದರು. ರಂಬಾನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅಬ್ದುಲ್ಲಾ,‘ಪಹಲ್ಗಾಮ್ನಲ್ಲಿ ದಾಳಿ ನಡೆದಿದ್ದನ್ನು ಅವರು(ಪಾಕ್) ಮೊದಲು ಒಪ್ಪಿಕೊಂಡಿರಲಿಲ್ಲ. ಬಳಿಕ,ಅದನ್ನು ಭಾರತವೇ ಮಾಡಿದೆ ಎಂದೂ ಅವರು ಹೇಳಿದ್ದರು. ಮೊದಲು ನಮ್ಮ ಮೇಲೆ ಆರೋಪ ಹೊರಿಸಿದವರೇ ಅವರು. ಹೀಗಾಗಿ ಅವರ ಬಗ್ಗೆ ಏನನ್ನಾದರೂ ಹೇಳುವುದು ಕಷ್ಟ. ಪಾಕ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ. ಘಟನೆಯು ನನಗೆ ವಿಷಾದವನ್ನುಂಟು ಮಾಡಿದೆ, ಅದು ನಡೆಯಬಾರದಿತ್ತು’ ಎಂದು ಹೇಳಿದ್ದರು.