ಜಾರ್ಖಂಡ್ ಸಚಿವನ ಸಂಬಂಧಿಯ ಮನೆ ಮೇಲೆ ಈಡಿ ದಾಳಿ | ಚುನಾವಣಾ ಸಿದ್ಧತೆ ಎಂದ ಸಿಎಂ

Update: 2024-10-15 04:17 GMT

PC: x.com/munsifdigital

ರಾಂಚಿ : ಕಾನೂನು ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ಸೋಮವಾರ ಜಾರ್ಖಂಡ್‍ನ ಸಚಿವರೊಬ್ಬರ ಸಂಬಂಧಿಕರು ಹಾಗೂ ಐಎಎಸ್ ಅಧಿಕಾರಿಯೊಬ್ಬರು ಸೇರಿದಂತೆ ಹಲವರ ಮನೆಗಳ ಮೇಲೆ 23 ಕಡೆಗಳಲ್ಲಿ ದಾಳಿ ನಡೆಸಿದರು.

ಈಡಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕೇಂದ್ರೀಯ ನೆರವಿನ ಜಲಜೀವನ್ ಮಿಷನ್‍ನ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಹಣಕಾಸು ವ್ಯವಹಾರ ಮತ್ತು ಹಣ ದುರುಪಯೋಗ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಹಝರಿಬಾಗ್‍ನಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರೀಯ ಯೋಜನೆಗಳ ಅನುಷ್ಠಾನದಲ್ಲಿ ವ್ಯಾಪಕ ಅವ್ಯವಹಾರಗಳು ನಡೆದಿವೆ ಎಂದು ಆಪಾದಿಸಿದ್ದರು.

ಹೇಮಂತ್ ಸೊರೇನ್ ಅವರ ಸಂಪುಟದಲ್ಲಿ ಸಚಿವರಾಗಿರುವ ಮಿಥಿಲೇಶ್ ಕುಮಾರ್ ಅವರ ಸಹೋದರ ವಿನಯ ಠಾಕೂರ್ ಅವರ ಚೈಬಾಸಾ ನಿವಾಸ, ಸಚಿವರ ಆಪ್ತ ಸಹಾಯಕ ಹರೇಂದ್ರ ಸಿಂಗ್ ಅವರ ರಾಂಚಿ ನಿವಾಸ ಹಾಗೂ ನೀರು ಮತ್ತು ನೈರ್ಮಲ್ಯ ಇಲಾಖೆಯ ಹಲವು ಮಂದಿ ಅಧಿಕಾರಿಗಳು ಹಾಗೂ ಎಂಜಿನಿಯರ ಗಳ ಮನೆಗಳ ಮೇಲೆ ಈಡಿ ತಂಡಗಳು ದಾಳಿ ನಡೆಸಿದವು.

ಹಲವು ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಪುರಾವೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

2023ರ ಡಿಸೆಂಬರ್‍ ನಲ್ಲಿ ಜಾರ್ಖಂಡ್ ಪೊಲೀಸರು ನೀರು ಮತ್ತು ನೈರ್ಮಲ್ಯ ಇಲಾಖೆಯ ಕ್ಲರ್ಕ್ ಸಂತೋಷ್ ಕುಮಾರ್ ಎಂಬಾತನ ಮೇಲೆ ಮತ್ತು ಅಪರಿಚಿತ ವ್ಯಕ್ತಿಗಳ ಮೇಲೆ ಎಫ್‍ಐಆರ್ ದಾಖಲಿಸಿದ್ದರು. ಸರ್ಕಾರಿ ಖಜಾನೆಯಿಂದ ಕುಮಾರ್ ಅವರ ಬ್ಯಾಂಕ್ ಖಾತೆಗೆ 23 ಕೋಟಿ ರೂಪಾಯಿ ಪಾವತಿಸಲಾಗಿದೆ ಮತ್ತು ಆ ಬಳಿಕ ಅವರು ಅದನ್ನು ತೆಗೆದಿದ್ದಾನರೆ ಎಂದು ಆರೋಪಿಸಲಾಗಿತ್ತು.

ಇದು ರಾಜಕೀಯ ದ್ವೇಷದ ದಾಳಿ ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಡುತ್ತಿರುವ ಚುನಾವಣಾ ಸಿದ್ಧತೆ ಎಂದು ಆಡಳಿತ ಪಕ್ಷವಾದ ಜೆಎಂಎಂ ಆಪಾದಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News