ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ ತಮಿಳು ವಾರಪತ್ರಿಕೆ ʼವಿಕಟನ್ʼ ವೆಬ್‌ಸೈಟ್‌ಗೆ ನಿರ್ಬಂಧ : ಎಡಿಟರ್ಸ್ ಗಿಲ್ಡ್ ಕಳವಳ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ತಮಿಳು ವಾರಪತ್ರಿಕೆ ವಿಕಟನ್ ನ ವೆಬ್‌ಸೈಟ್ (Vikatan.com) ಅನ್ನು ನಿರ್ಬಂಧಿಸಿರುವ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.
ತಮಿಳು ವಾರಪತ್ರಿಕೆ 'ವಿಕಟನ್' ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಕೈಕೋಳ ಧರಿಸಿದ ಪ್ರಧಾನಿ ಮೋದಿಯವರ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು. ಅಮೆರಿಕದಿಂದ ಅಕ್ರಮ ಭಾರತೀಯ ವಲಸಿಗರನ್ನು ಕೈಕೋಳ ಧರಿಸಿ ಅಮಾನವೀಯವಾಗಿ ಗಡೀಪಾರು ಮಾಡುವುದನ್ನು ವ್ಯಂಗ್ಯ ಚಿತ್ರವು ಟೀಕಿಸಿತ್ತು. ವ್ಯಂಗ್ಯಚಿತ್ರವನ್ನು ಬಿಜೆಪಿ ಬೆಂಬಲಿಗರು ಟೀಕಿಸಿದ್ದಾರೆ. ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಪಕ್ಷವು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರಿಗೆ ದೂರು ಸಲ್ಲಿಸಿತ್ತು. ಇದರ ಬೆನ್ನಲ್ಲೇ ತಮಿಳು ವಾರಪತ್ರಿಕೆ ವಿಕಟನ್ ವೆಬ್‌ಸೈಟ್‌ಗೆ ನಿರ್ಬಂಧಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಎಡಿಟರ್ಸ್ ಗಿಲ್ಡ್, ವ್ಯಂಗ್ಯಚಿತ್ರಗಳು ಯಾವಾಗಲೂ ನ್ಯಾಯಸಮ್ಮತ ಪತ್ರಿಕೋದ್ಯಮದ ಭಾಗವಾಗಿದೆ. ವಿಕಟನ್ ವೆಬ್‌ಸೈಟ್‌ಗೆ ದಿಢೀರ್ ನಿರ್ಬಂಧಿಸಿರುವುದು ಅಧಿಕಾರಿಗಳ ಅತಿಕ್ರಮಣದ ನಡೆಗೆ ಒಂದು ಉದಾಹರಣೆಯಾಗಿದೆ ಎಂದು ಹೇಳಿದೆ. ಹೇಳಿಕೆಗೆ ಗಿಲ್ಡ್ ಅಧ್ಯಕ್ಷ ಅನಂತನಾಥ್, ಪ್ರಧಾನ ಕಾರ್ಯದರ್ಶಿ ರೂಬೆನ್ ಬ್ಯಾನರ್ಜಿ ಮತ್ತು ಕೋಶಾಧಿಕಾರಿ ಕೆ ವಿ ಪ್ರಸಾದ್ ಸಹಿ ಹಾಕಿದ್ದಾರೆ.
ʼಹೆಚ್ಚು ಶೋಚನೀಯ ಸಂಗತಿಯೆಂದರೆ, ರಾಜಕೀಯ ಪಕ್ಷವೊಂದರ ರಾಜ್ಯ ಘಟಕದ ಮುಖ್ಯಸ್ಥರು ಈ ವ್ಯಂಗ್ಯಚಿತ್ರದ ವಿರುದ್ಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ ನಂತರ ಸಂಪೂರ್ಣವಾಗಿ ವೆಬ್ ಸೈಟ್‌ಗೆ ನಿರ್ಬಂಧ ವಿಧಿಸಲಾಗಿದೆ. ವೆಬ್ ಪೋರ್ಟಲ್ ಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ ಮತ್ತು ನ್ಯಾಯಯುತ ವಿಚಾರಣೆಗೆ ಯಾವುದೇ ಅವಕಾಶವನ್ನು ನೀಡಿಲ್ಲ. ವೆಬ್‌ಸೈಟ್‌ನ್ನು ನಿರ್ಬಂಧಿಸಿದ ನಂತರ ಪ್ರಕಾಶಕರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿ ತಂತ್ರಜ್ಞಾನ ನಿಯಮಾವಳಿ-2021ರ ಅಡಿಯಲ್ಲಿ ರಚಿಸಲಾದ ಆಂತರಿಕ ಸಮಿತಿಯ ವಿಚಾರಣೆಗೆ ಕರೆಯಲಾಗಿದೆ. ಆದೇಶವನ್ನು ನಿರಂಕುಶವಾಗಿ ಜಾರಿಗೊಳಿಸಿದ ನಂತರ ಸರಿಯಾದ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆʼ ಎಂದು ಗಿಲ್ಡ್ ಗಮನಿಸಿದೆ.
2021ರ ಐಟಿ ನಿಯಮ 9(1) ಮತ್ತು (3)ಕ್ಕೆ ಸಂಬಂಧಿಸಿ ಬಾಂಬೆ ಉಚ್ಚ ನ್ಯಾಯಾಲಯವು ಈಗಾಗಲೇ ತಡೆಯಾಜ್ಞೆ ನೀಡಿದೆ. ಇದರ ಆಧಾರದ ಮೇಲೆ ಪ್ರಕಾಶಕರ ವಿರುದ್ಧದ ದೂರುಗಳ ವಿಚಾರಣೆಗೆ ಸಂಬಂಧಿಸಿ ಅಂತರಿಕ ಸಮಿತಿಯ ಅಧಿಕಾರ ಸೀಮಿತವಾಗಿದೆ. ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ವೆಬ್‌ಸೈಟ್ ಅನ್ನು ನಿರ್ಬಂಧಿಸುವುದು ನ್ಯಾಯಯುತ ಮತ್ತು ಪಾರದರ್ಶಕತೆಯನ್ನು ಗೌರವಿಸುವ ಭಾರತದ ಪ್ರಜಾಸತ್ತಾತ್ಮಕ ಸಂಪ್ರದಾಯಗಳಿಗೆ ಒಳಿತಲ್ಲ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.
ವ್ಯಂಗ್ಯಚಿತ್ರಕಾರರನ್ನು ಕೊಲೆ ಬೆದರಿಕೆ ಹಾಕಲಾಗಿದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಟೀಕಿಸಲಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಬೇಸರವನ್ನು ವ್ಯಕ್ತಪಡಿಸಿದ್ದು, ವಿಕಟನ್ ಮೇಲಿನ ನಿರ್ಬಂಧವನ್ನು ಹಿಂಪಡೆಯುವಂತೆ ಆಗ್ರಹಿಸಿದೆ.
ಸೌಜನ್ಯ: thewire.in