Fact Check : ಪ್ರಧಾನಿ ಮೋದಿ ಮತಗಳಿಗಾಗಿ ಮೂರು ತಿಂಗಳ ಉಚಿತ ಮೊಬೈಲ್ ರೀಚಾರ್ಜ್ ಕೊಡುಗೆ ನೀಡುತ್ತಿದ್ದಾರೆಯೇ? ಇಲ್ಲಿದೆ ವಾಸ್ತವಾಂಶ
ಹೊಸದಿಲ್ಲಿ: 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಸಂದೇಶವೊಂದು ವಾಟ್ಸ್ ಆ್ಯಪ್, ಫೇಸ್ ಬುಕ್ ಹಾಗೂ ಎಕ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷವು ಎಲ್ಲ ಭಾರತೀಯ ಮೊಬೈಲ್ ಬಳಕೆದಾರರಿಗೆ ಮೂರು ತಿಂಗಳ ಉಚಿತ ರೀಚಾರ್ಜ್ ಕೊಡುಗೆ ನೀಡುತ್ತಿದೆ ಎಂದು. ಈ ಕೊಡುಗೆಯನ್ನು ಪ್ರಚಾರ ಮಾಡುತ್ತಿರುವ ಅಂತರ್ಜಾಲ ಕೊಂಡಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಬಿಜೆಪಿ ಉಚಿತ ರೀಚಾರ್ಜ್ ಯೋಜನೆ: 2024ರ ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ನೀಡಿ, ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಭಾರತೀಯ ಬಳಕೆದಾರರಿಗೂ ಉಚಿತ ರೀಚಾರ್ಜ್ ಕೊಡುಗೆ ನೀಡುತ್ತಿದ್ದಾರೆ. ಮೂರು ತಿಂಗಳ ಉಚಿತ ರೀಚಾರ್ಜ್ ಕೊಡುಗೆಯನ್ನು ಪಡೆಯಲು ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ (ಕೊನೆಯ ದಿನಾಂಕ ಅಕ್ಟೋಬರ್ 31, 2023) ಎಂದು ಆ ಸಂದೇಶದಲ್ಲಿ ಹೇಳಲಾಗಿದೆ.
Fact Check:
ಈ ಕುರಿತು Fact Check ನಡೆಸಿದಾಗ ಪ್ರತಿ ಮೊಬೈಲ್ ಸೇವಾದಾರರು ವಿಭಿನ್ನ ರೀಚಾರ್ಜ್ ಯೋಜನೆಗಳನ್ನು ಹೊಂದಿದ್ದು, ಸಂದೇಶದೊಂದಿಗೆ ಒದಗಿಸಲಾಗಿರುವ ಕೊಂಡಿಯು ವಿಶ್ವಾಸಾರ್ಹವಾಗಿಲ್ಲ ಎಂಬುದು ಪತ್ತೆಯಾಗಿದೆ.ಬಿಜೆಪಿಯಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಜನರೆದುರು ಇಂತಹ ಕೊಡುಗೆಯನ್ನು ಮಂಡಿಸಿಲ್ಲ. ಅಂತಹ ಯಾವುದೇ ಸಂದೇಶವು ಬಿಜೆಪಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಾಗಲಿ ಅಥವಾ ಅಧಿಕೃತ ಅಂತರ್ಜಾಲ ತಾಣದಲ್ಲಾಗಲಿ, ಮೂರು ತಿಂಗಳ ಕಾಲ ಉಚಿತ ಮೊಬೈಲ್ ರೀಚಾರ್ಜ್ ಒದಗಿಸಲಾಗುವುದು ಎಂದು ಹೇಳಿರುವುದು ಕಂಡು ಬಂದಿಲ್ಲ ಎಂದು newsable.asianetnews.com ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೊಂಡಿಯ ನೈಜತೆಯನ್ನೂ ಪರಿಶೀಲಿಸಲಾಗಿದೆ. ಬಿಜೆಪಿಯ ಅಧಿಕೃತ ಅಂತರ್ಜಾಲ ತಾಣದ ಗುರುತು www.bjp.org ಆಗಿದೆ. ಆದರೆ, ಉಚಿತ ರೀಚಾರ್ಜ್ ಕೊಡುಗೆಯನ್ನು ಪ್ರಕಟಿಸಿರುವ ಸಂದೇಶವನ್ನು ಒಳಗೊಂಡಿರುವ ಅಂತರ್ಜಾಲ ತಾಣದ ಯುಆರ್‍ಎಲ್ ಕೊಂಡಿಯು http://www.bjp.org@bjp2024 ಎಂದಾಗಿದೆ. ಈ ಅಂತರ್ಜಾಲ ತಾಣದ ಡೊಮೈನ್ ಅಮೆರಿಕಾದ್ದಾಗಿದೆ. ಇದರೊಂದಿಗೆ ಮೇಲಿನ ಅಂತರ್ಜಾಲದಲ್ಲಿ ಪ್ರಕಟವಾಗಿರುವ ಸಂದೇಶವು ಬಿಜೆಪಿಯದ್ದಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ್ದಲ್ಲ ಎಂಬುದು ದೃಢಪಟ್ಟಿದೆ.