ರೈತರ ಪ್ರತಿಭಟನೆ : ಶಂಭು ಗಡಿಯ ತನ್ನ ಭಾಗದಲ್ಲಿ ಡ್ರೋನ್ ಬಳಸಿದ ಹರಿಯಾಣದ ಕ್ರಮವನ್ನು ಆಕ್ಷೇಪಿಸಿದ ಪಂಜಾಬ್
ಚಂಡೀಗಢ : ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ, ಶಂಭು ಗಡಿಯ ತನ್ನ ಭಾಗದಲ್ಲಿ ಡ್ರೋನ್ ಮೂಲಕ ಅಶ್ರುವಾಯು ಶೆಲ್ ಪ್ರಯೋಗಿಸಿದ ಹರಿಯಾಣ ಪ್ರಾಧಿಕಾರಗಳ ಕ್ರಮವನ್ನು ಪಂಜಾಬ್ ಸರಕಾರವು ಆಕ್ಷೇಪಿಸಿದೆ ಎಂದು ಬುಧವಾರ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಅಂಬಾಲಾ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಪಂಜಾಬ್ ರಾಜ್ಯದ ಪಾಟಿಯಾಲ ಜಿಲ್ಲಾಧಿಕಾರಿ ಸೌಕತ್ ಅಹ್ಮದ್ ಪರ್ರೆ, ಅಂಬಾಲಾ ಬಳಿಯಿರುವ ಶಂಭು ಗಡಿಯ ತನ್ನ ಪ್ರಾಂತ್ಯದೊಳಗೆ ಡ್ರೋನ್ ಅನ್ನು ರವಾನಿಸಬೇಡಿ ಎಂದು ಅವರಿಗೆ ತಾಕೀತು ಮಾಡಿದ್ದಾರೆ.
ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದಿಲ್ಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ಶಂಭು ಗಡಿ ಬಳಿ ತಡೆಗೋಡೆಗಳನ್ನು ತೆರವುಗೊಳಿಸಲು ಯತ್ನಿಸಿದಾಗ, ಹರಿಯಾಣ ಭದ್ರತಾ ಸಿಬ್ಬಂದಿಗಳು ರೈತರನ್ನು ಚದುರಿಸಲು ಡ್ರೋನ್ ಮೂಲಕ ಅಶ್ರುವಾಯು ಶೆಲ್ ಪ್ರಯೋಗಿಸಿದರು.
ನಾವು ಪಂಜಾಬ್ ಗಡಿ ಭಾಗದೊಳಗೇ ಇರುವಾಗ ಮಾನವ ರಹಿತ ಡ್ರೋನ್ ಮೂಲಕ ನಮ್ಮ ಮೇಲೆ ಅಶ್ರುವಾಯು ಶೆಲ್ ದಾಳಿಯನ್ನು ನಡೆಸಲಾಯಿತು ಎಂದು ರೈತರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಟಿಯಾಲ ಜಿಲ್ಲಾಧಿಕಾರಿ ಪರ್ರೆ, "ನಮ್ಮ ಪ್ರದೇಶದೊಳಗೆ ಡ್ರೋನ್ ರವಾನಿಸಬೇಡಿ ಎಂದು ಅಂಬಾಲಾ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ" ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ವಿಚಾರವನ್ನು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿಗೂ ತಿಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ನಾನು ಈ ವಿಷಯವನ್ನು ಅಂಬಾಲಾ ಪ್ರಾಧಿಕಾರಗಳೊಂದಿಗೆ ಚರ್ಚಿಸಿದ ನಂತರ, ಅವರು ನಮ್ಮ ಗಡಿ ಭಾಗದಲ್ಲಿ ಡ್ರೋನ್ ಹಾರಾಟವನ್ನು ನಿರ್ಬಂಧಿಸಿದ್ದಾರೆ ಎಂದು ಪರ್ರೆ ಮಾಹಿತಿ ನೀಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಡ್ರೋನ್ ಮೂಲಕ ಅಶ್ರುವಾಯು ಶೆಲ್ ಪ್ರಯೋಗಿಸಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ, ಮಂಗಳವಾರ ರಾಷ್ಟ್ರ ರಾಜಧಾನಿ ದಿಲ್ಲಿಗೆ ತಾವು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವಿನ ಎರಡು ಗಡಿಗಳಲ್ಲಿ ಅಡ್ಡಲಾಗಿರಿಸಲಾಗಿದ್ದ ತಡೆಗೋಡೆಗಳನ್ನು ರೈತರು ಮುರಿಯಲು ಯತ್ನಿಸಿದ್ದರಿಂದ, ರೈತರು ಹಾಗೂ ಹರಿಯಾಣ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿತು. ಈ ಸಂದರ್ಭದಲ್ಲಿ ಪೊಲೀಸರು ರೈತರ ಮೇಲೆ ಅಶ್ರುವಾಯು ಶೆಲ್ ಹಾಗೂ ಜಲ ಫಿರಂಗಿಗಳನ್ನು ಬಳಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.