ಬುಲ್ಡೋಝರ್‌ನಿಂದ ಮನೆ ಧ್ವಂಸಗೊಳಿಸುವುದು ಕೂಡ ಭಯೋತ್ಪಾದನೆ ಎಂದ ಲಕ್ನೋ ವಿವಿ ಪ್ರಾಧ್ಯಾಪಕಿ ವಿರುದ್ಧ ಎಫ್ಐಆರ್

Photo | moneycontrol
ಹೊಸದಿಲ್ಲಿ : ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಿತ ಪೋಸ್ಟ್ ಮಾಡಿದ್ದ ಲಕ್ನೋ ವಿವಿ ಪ್ರಾಧ್ಯಾಪಕಿಯೋರ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗೆ ಸಂಬಂಧಿಸಿ ಎಬಿವಿಪಿ ನಾಯಕ ಜತಿನ್ ಶುಕ್ಲಾ ದೂರಿನ ಮೇರೆಗೆ ಲಕ್ನೋ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮಾದ್ರಿ ಕಾಕೊಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ʼಮಾದ್ರಿ ಕಾಕೊಟಿ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮೂಲಕ ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದಾರೆ. ಇದು ದೇಶದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. ಅವರ ಪೋಸ್ಟ್‌ಗಳು ಭಾರತದಲ್ಲಿ ಗಲಭೆಗಳನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ. ಕಾಕೊಟಿ ತನ್ನ ಪೋಸ್ಟ್‌ನಲ್ಲಿ ʼಕೇಸರಿ ಭಯೋತ್ಪಾದಕರುʼ ಎಂಬ ಪದ ಬಳಕೆ ಮಾಡಿದ್ದಾರೆ. ಆಕೆಯ ಪೋಸ್ಟ್‌ಗಳು ಭಾರತದಲ್ಲಿ ಗಲಭೆಗಳನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವಂತೆ ತೋರುತ್ತಿದೆ. ಇದಲ್ಲದೆ, ಅವರ ಕೆಲವು ಪೋಸ್ಟ್‌ಗಳನ್ನು ಪಾಕಿಸ್ತಾನದ ವಾಹಿನಿಗಳು ಹಂಚಿಕೊಂಡಿವೆʼ ಎಂದು ದೂರುದಾರರು ಆರೋಪಿಸಿದ್ದಾರೆ ಪೊಲೀಸರು ತಿಳಿಸಿದ್ದಾರೆ.
ಹಸನ್‌ಗಂಜ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅಮರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ಡಾ. ಮಾದ್ರಿ ಕಾಕೊಟಿ ವಿರುದ್ಧ ದೇಶದ್ರೋಹ ಸೇರಿದಂತೆ ಇತರ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಡಾ. ಮಾದ್ರಿ ಕಕೊಟಿ ಅವರು ಎಕ್ಸ್‌ನಲ್ಲಿ 1.50 ಲಕ್ಷ ಬೆಂಬಲಿಗರನ್ನು ಹೊಂದಿದ್ದಾರೆ. ಅವರು ಡಾ ಮೆಡುಸಾ ಎಂದೇ ಖ್ಯಾತಿ ಹೊಂದಿದ್ದಾರೆ.
ಮಾದ್ರಿ ಕಕೊಟಿ ವಿವಾದಿತ ಪೋಸ್ಟ್‌ನಲ್ಲಿ ʼಯಾರನ್ನಾದರೂ ಧರ್ಮದ ಹೆಸರಿನಲ್ಲಿ ಕೊಲೆ ಮಾಡುವುದು ಹತ್ಯೆಯಾಗಿದೆ. ಅದೇ ರೀತಿ ಧರ್ಮದ ಹೆಸರಿನಿಂದ ಜನರನ್ನು ಉದ್ಯೋಗದಿಂದ ವಂಚಿತರನ್ನಾಗಿಸುವುದು, ಬಾಡಿಗೆಗೆ ಮನೆಗಳನ್ನು ನೀಡದಿರುವುದು, ಬುಲ್ಡೋಝರ್‌ನಿಂದ ಮನೆಗಳನ್ನು ನಾಶಪಡಿಸುವುದು ಸೇರಿದಂತೆ ಹಲವು ಕೃತ್ಯಗಳನ್ನು ಎಸಗುವುದು ಕೂಡ ಭಯೋತ್ಪಾದನೆಯಾಗಿದೆ' ಎಂದು ಹೇಳಿದ್ದರು.
ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಕಾಕೊಟಿ, ನಾನು ಹೇಳಿರುವುದು ಶೇ.100 ರಷ್ಟು ಸತ್ಯವಾಗಿದೆ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಇದು ಸಾಮಾನ್ಯವಾಗಿದ್ದು, ಭಯೋತ್ಪಾದನೆಯು ಅದನ್ನು ಉಂಟುಮಾಡುವ ವ್ಯಾಖ್ಯಾನದೊಳಗೆಯೇ ತೋರಿಸುತ್ತದೆ ಎಂದು ಹೇಳಿದ್ದರು.