ಮುಂಬೈ : ಈಡಿ ಕಚೇರಿ ಕಟ್ಟಡದಲ್ಲಿ ಅಗ್ನಿ ಅವಘಡ

Photo | PTI
ಮುಂಬೈ : ದಕ್ಷಿಣ ಮುಂಬೈನಲ್ಲಿ ಜಾರಿ ನಿರ್ದೇಶನಾಲಯದ ಕಚೇರಿ ಇರುವ ಕೈಸರ್-ಐ-ಹಿಂದ್ ಕಟ್ಟಡದಲ್ಲಿ ರವಿವಾರ ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಜಾರಿ ನಿರ್ದೇಶನಾಲಯದ ಕಚೇರಿಯ ಒಳಗಿದ್ದ ಹಲವಾರು ದಾಖಲೆಗಳು ಸುಟ್ಟು ಭಸ್ಮವಾಗಿರುವ ಸಾಧ್ಯತೆ ಇದೆ. ಉಪಕರಣಗಳು ಕೂಡ ಹಾನಿಗೀಡಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಕನಿಷ್ಠ ಎಂಟು ಅಗ್ನಿಶಾಮಕ ವಾಹನಗಳು, ನೀರಿನ ಟ್ಯಾಂಕರ್‌ಗಳು ಮತ್ತು ಇತರ ಉಪಕರಣಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಐದು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಳಗಿನ ಜಾವ 2.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆ ಬಳಿಕ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.