ಭದ್ರತಾ ಕೆಲಸದಿಂದ ಬೋಸ್ಟನ್ ಮ್ಯಾರಥಾನ್ ವರೆಗೆ; ದಿಲ್ಲಿ ಭದ್ರತಾ ಸಿಬ್ಬಂದಿಯೊಬ್ಬರ ಯಶೋಗಾಥೆ
ಹೊಸದಿಲ್ಲಿ: “ಮನಸ್ಸಿದ್ದರೆ ಮಾರ್ಗ” ಎಂಬ ನಾಣ್ಣುಡಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಈ ನಾಣ್ಣುಡಿಗೆ ನಿದರ್ಶನವಾಗಿ ಆಗಾಗ ದೊಡ್ಡ ಯಶಸ್ಸಿನ ಕತೆಗಳು ಜಗತ್ತಿನ ಮುಂದೆ ಬಹಿರಂಗಗೊಳ್ಳುತ್ತಿರುತ್ತವೆ. ಇಂತಹುದೇ ಯಶೋಗಾಥೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ದಿಲ್ಲಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ವ್ಯಕ್ತಿಯೊಬ್ಬ, ಈ ಬಾರಿಯ ಬೋಸ್ಟನ್ ಮ್ಯಾರಥಾನ್ ನಲ್ಲಿ ಭಾಗವಹಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ ಎಂದು newslaundry.com ವರದಿ ಮಾಡಿದೆ.
ಮಹತ್ವಾಕಾಂಕ್ಷಿ ವಿಜಯ್ ಕುಮಾರ್ ಅವರಿಗೀಗ 46 ವರ್ಷ ವಯಸ್ಸು. ಅವರು ತಾನೊಂದು ದಿನ ಬೋಸ್ಟನ್ ಮ್ಯಾರಥಾನ್ ನಲ್ಲಿ ಭಾಗವಹಿಸಬೇಕು ಎಂಬ ಭಾರಿ ಕನಸನ್ನು ಕಟ್ಟಿಕೊಂಡಿದ್ದರು. ಅವರ ಸತತ ಪರಿಶ್ರಮ, ಶ್ರದ್ಧೆ ಹಾಗೂ ತಾಳ್ಮೆಯ ಕಾರಣಕ್ಕೆ ಆ ದಿನವೂ ಅವರ ಪಾಲಿಗೆ ಒಲಿದು ಬಂದಿದೆ.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಿವಾಸಿಯಾದ ವಿಜಯ್ ಕುಮಾರ್ ದಿಲ್ಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯಲ್ಲಿ 23 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬಹುತೇಕ ಎಲ್ಲ ವಲಸಿಗರಂತೆ ಕುಮಾರ್ ಕೂಡಾ ನೈರುತ್ಯ ದಿಲ್ಲಿಯ ಸಗರ್ ಪುರ್ ನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಅವರ ಪತ್ನಿ, ಪುತ್ರ ಹಾಗೂ ಪುತ್ರಿಯು ತಮ್ಮ ಗಿರಿನಾಡಿನ ಗ್ರಾಮದಲ್ಲೇ ವಾಸಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಕುಮಾರ್ ಭಾರತೀಯ ಸೇನಾಪಡೆಯನ್ನು ಸೇರ್ಪಡೆಯಾಗಲು ಬಯಸಿದ್ದರು. ಆದರೆ, 1990ರಲ್ಲಿ ಮೂರು ಯತ್ನಗಳಲ್ಲಿ ವಿಫಲವಾದ ನಂತರ, ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ಖಾಸಗಿ ಕೆಲಸ ಮಾಡಲು ದಿಲ್ಲಿಗೆ ವಲಸೆ ಬಂದರು. ಮೇ 2001ರಲ್ಲಿ ಬ್ರಿಟನ್ ನಲ್ಲಿ ಮುಖ್ಯ ಕಚೇರಿ ಹೊಂದಿರುವ ಭದ್ರತಾ ಸೇವಾ ಸಂಸ್ಥೆಯಾದ ಜಿ4ಎಸ್ ನೊಂದಿಗೆ ಉದ್ಯೋಗಕ್ಕೆ ಸೇರ್ಪಡೆಯಾದರು. ಅಲ್ಲಿಂದ ಅವರು ಗುತ್ತಿಗೆ ಆಧಾರದಲ್ಲಿ ಅಮೆರಿಕಾ ರಾಯಭಾರ ಕಚೇರಿಯ ಬಳಿ ಕೆಲಸ ನಿರ್ವಹಿಸುತ್ತಿದ್ದಾರೆ.
ತಮ್ಮ ಮ್ಯಾರಥಾನ್ ಪಯಣದ ಕುರಿತು ಪ್ರತಿಕ್ರಿಯಿಸುವ ವಿಜಯ್ ಕುಮಾರ್, “ನಾನು ನನ್ನ ಇಡೀ ಜೀವನವನ್ನು ಮ್ಯಾರಥಾನ್ ಗಾಗಿಯೇ ಬದುಕಿದ್ದೇನೆ. ಪ್ರತಿದಿನ ಜನರು ವೀಸಾ ಸಂದರ್ಶನಕ್ಕಾಗಿ ಅಮೆರಿಕಾ ರಾಯಭಾರ ಕಚೇರಿಗೆ ಭೇಟಿ ನೀಡುವುದನ್ನು ನೋಡುತ್ತಲಿದ್ದೆ. ನಾನೂ ಕೂಡಾ ಅವರ ಪೈಕಿ ಒಬ್ಬನಾಗುವೆ ಎಂದು ಎಣಿಸಿರಲಿಲ್ಲ. 500 ಬಲಿಷ್ಠ ಭದ್ರತಾ ಸಿಬ್ಬಂದಿಗಳ ಪೈಕಿ ಆ ಅವಕಾಶ ಪಡೆದ ಮೊಟ್ಟಮೊದಲಿಗ ನಾನಾಗಿದ್ದೇನೆ” ಎಂದು ಹೇಳುತ್ತಾರೆ.
ಕಳೆದ ಎಂಟು ವರ್ಷಗಳಲ್ಲಿ ವಿಜಯ್ ಕುಮಾರ್ 10 ಮ್ಯಾರಥಾನ್ ಗಳಲ್ಲಿ ಅಭ್ಯಾಸ ಮಾಡಿದ್ದಾರೆ. ಈ ಪೈಕಿ ದಿಲ್ಲಿ, ಗುರುಗ್ರಾಮ, ಮುಂಬೈ, ಅಹಮದಾಬಾದ್, ಚಂಡೀಗಢ ಹಾಗೂ ಲಡಾಖ್ ನಲ್ಲಿ ಆಯೋಜನೆಗೊಂಡಿದ್ದ ಮ್ಯಾರಥಾನ್ ಗಳೂ ಸೇರಿವೆ. ಅವರು ಈವರೆಗೆ ಕನಿಷ್ಠ 30 ಪದಕಗಳನ್ನು ಜಯಿಸಿದ್ದು, ಅವುಗಳಲ್ಲಿ ಬಹುತೇಕ ಪದಕಗಳು ಪ್ಲಾಸ್ಟಿಕ್ ಚೀಲದಲ್ಲಿ ತನ್ನ ನೆಲೆ ಕಂಡುಕೊಂಡಿವೆ.
ಈ ಪೈಕಿ ಎಚ್ಚರಿಕೆಯಿಂದ ಬೋಸ್ಟನ್ ಮ್ಯಾರಥಾನ್ ಪದಕವನ್ನು ಚೀಲದಿಂದ ಹೊರತೆಗೆದ ವಿಜಯ್ ಕುಮಾರ್, “ನನ್ನ ಇತರ ಪದಕಗಳನ್ನು ನೇತು ಹಾಕಲು ಕೊಠಡಿಯಲ್ಲಿ ಸ್ಥಳಾವಕಾಶವೇ ಇಲ್ಲ” ಎಂದು ಹಾಸ್ಯ ಮಾಡುತ್ತಾರೆ.
ಬಹುಮುಖ್ಯವಾಗಿ ನನ್ನ ಓಟದೆಡೆಗಿನ ಮೋಹದಿಂದ ನನಗೆ ಅಥ್ಲೀಟ್ ಎಂಬ ಮತ್ತೊಂದು ಗುರುತು ದೊರೆತಿದೆ ಎಂದು ವಿಜಯ್ ಕುಮಾರ್ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಅವರ ಆ ಮಾತಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದ ಸಂತೃಪ್ತಿ ಇತ್ತು.