ಅಂತರ್‌ರಾಷ್ಟ್ರೀಯ ಬೀಫ್ ರಫ್ತು ಮಾರುಕಟ್ಟೆ ಪ್ರವೇಶಿಸಿದ ಗೋವಾ

Update: 2025-02-04 16:43 IST
Photo of container ship

ಸಾಂದರ್ಭಿಕ ಚಿತ್ರ (Photo: PTI)

  • whatsapp icon

ಪಣಜಿ: ಗೋವಾ ಮೀಟ್ ಕಾಂಪ್ಲೆಕ್ಸ್ (ಜಿಎಂಸಿ) ಮೂಲಕ ಮಧ್ಯಪ್ರಾಚ್ಯಕ್ಕೆ ಬೀಫ್ ಕಳುಹಿಸುವುದರೊಂದಿಗೆ ಗೋವಾ ಅಂತರರಾಷ್ಟ್ರೀಯ ಬೀಫ್ ರಫ್ತು ಮಾರುಕಟ್ಟೆಯನ್ನು ಪ್ರವೇಶಿಸಿದೆ. ಮಂಗಳವಾರ ಒಟ್ಟು 28.5 ಟನ್ ಘನೀಕೃತ ಬೀಫ ಅನ್ನು ಇರಾಕ್‌ಗೆ ಸಾಗಣೆಗಾಗಿ ಲೋಡ್ ಮಾಡಲಾಗಿದೆ. ಬೀಫ್ ರಫ್ತಿಗಾಗಿ ಸರಕಾರಿ ಸ್ವಾಮ್ಯದ ಜಿಎಂಸಿ ಜೊತೆಗೆ ಕರ್ನಾಟಕದ ಸನ್‌ಫೇಸ್ ಆಗ್ರೋಫುಡ್ಸ್ ಕೈಜೋಡಿಸಿದೆ ಎಂದು Times of India ವರದಿ ಮಾಡಿದೆ.

‘ನಾವು ಇದೇ ಮೊದಲ ಬಾರಿಗೆ ಇರಾಕ್‌ಗೆ ಘನೀಕೃತ ಬೀಫ್ ಪೂರೈಸುತ್ತಿದ್ದೇವೆ’ ಎಂದು ಹೇಳಿದ ಜಿಎಂಸಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೆನ್ನಿ ಅವರು, ರಫ್ತುಗಳಿಗಾಗಿ ಕಸಾಯಿ ಖಾನೆಯ ಹೆಚ್ಚುವರಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಜಿಎಂಸಿ ಸನ್‌ಫೇಸ್ ಆಗ್ರೋಫುಡ್ಸ್ ಪ್ರೈ.ಲಿ.ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಸನ್‌ಫೇಸ್ ಆಗ್ರೋಫುಡ್ಸ್ ಜಿಎಂಸಿ ಮೂಲಕ ವಿದೇಶಗಳಿಗೆ ಬೀಫ್ ರಫ್ತು ಮಾಡಲಿದೆ. ಏಳೆಂಟು ದೇಶಗಳೊಂದಿಗೆ ರಫ್ತು ಒಪ್ಪಂದವನ್ನು ಮಾಡಿಕೊಂಡಿದ್ದು,ತಿಂಗಳಿಗೆ ಸುಮಾರು 20 ಕಂಟೇನರ್‌ಗಳನ್ನು ಪೂರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ತಿಳಿಸಿದರು.

ಉಸ್ಗಾವ್‌ನಲ್ಲಿರುವ ಜಿಎಂಸಿಯ ಕಸಾಯಿಖಾನೆಯು ದಿನಕ್ಕೆ 300 ಪ್ರಾಣಿಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು,ಸುಧಾರಿತ ಬ್ಲಾಸ್ಟ್ ಫ್ರೀಝಿಂಗ್ ತಂತ್ರಜ್ಞಾನದೊಂದಿಗೆ ಸಜ್ಜಾಗಿದೆ. ಸನ್‌ಫೇಸ್ ಆಗ್ರೋಫುಡ್ಸ್ ಸ್ಥಾಪಿಸಿರುವ ಈ ವ್ಯವಸ್ಥೆಯಿಂದಾಗಿ ಆಗಷ್ಟೇ ವಧಿಸಿದ ಜಾನುವಾರುಗಳನ್ನು 30 ನಿಮಿಷಗಳಲ್ಲಿ ಘನೀಕರಿಸಬಹುದು,ಇದರಿಂದಾಗಿ ಅಂತರರಾಷ್ಟ್ರೀಯ ಸಾಗಾಣಿಕೆಗಾಗಿ ಅದು ತನ್ನ ತಾಜಾತನವನ್ನು ಉಳಿಸಿಕೊಳ್ಳುತ್ತದೆ.

‘ಗೋವಾದಲ್ಲಿ ಸಾಕಷ್ಟು ಜಾನುವಾರುಗಳಿಲ್ಲ,ಹೀಗಾಗಿ ಅವುಗಳನ್ನು ನೆರೆಯ ಮಹಾರಾಷ್ಟ್ರ ಮತ್ತು ಕರ್ನಾಟಕಗಳಿಂದ ಖರೀದಿಸಲಾಗುವುದು. ಪ್ರಸ್ತುತ ಬೆಹರೀನ್,ಕುವೈಟ್ ಮತ್ತು ಯುಎಇ ನಮ್ಮ ರಫ್ತು ಪಟ್ಟಿಯಲ್ಲಿವೆ ’ಎಂದು ಕೆನ್ನಿ ತಿಳಿಸಿದರು.

ಜಿಎಂಸಿ ಬೀಫ್ ರಫ್ತಿಗಾಗಿ ಈಗಾಗಲೇ ಗಲ್ಫ್ ಸಹಕಾರ ಮಂಡಳಿ(ಜಿಸಿಸಿ)ಯ ದೇಶಗಳಿಗೆ ಅರ್ಜಿಗಳನ್ನು ಸಲ್ಲಿಸಿದೆ. ಸಂಭಾವ್ಯ ರಫ್ತು ಸೌಲಭ್ಯಗಳ ಮೌಲ್ಯಮಾಪನಕ್ಕಾಗಿ ಈಜಿಪ್ಟ್‌ನ ನಿಯೋಗವೊಂದು ಫೆಬ್ರವರಿಯಲ್ಲಿ ಇಲ್ಲಿಯ ಕಸಾಯಿಖಾನೆಗೆ ಭೇಟಿ ನೀಡುವ ನಿರೀಕ್ಷೆಯಿದೆ.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ► https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News