"ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಜೈಲಿಗೆ ಹೋಗುತ್ತಿದ್ದೇನೆ": ಶರಣಾಗತಿಗೂ ಮುನ್ನ ಕೇಜ್ರಿವಾಲ್ ಭಾವುಕ ಸಂದೇಶ
ಹೊಸದಿಲ್ಲಿ: ಜೂನ್ 1ಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅವಧಿ ಮುಗಿಯಲಿದ್ದು, ಮರುದಿನ ಅವರು ತಿಹಾರ್ ಜೈಲಿಗೆ ಮರಳಬೇಕಿದೆ. ಈ ಹಿನ್ನೆಲೆಯಲ್ಲಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, "ನಾನು ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಜೈಲಿಗೆ ಹೋಗುತ್ತಿರುವುದಕ್ಕೆ ಹೆಮ್ಮೆಯಿದೆ” ಎಂದು ಹೇಳಿಕೊಂಡಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂ ಕೋರ್ಟ್, ಮರುದಿನ ತಿಹಾರ್ ಜೈಲಿಗೆ ಮರಳಬೇಕು ಎಂದು ಅವರಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, “ನಾಳೆ 21 ದಿನ ಮುಕ್ತಾಯಗೊಳ್ಳಲಿದೆ. ಮರುದಿನ ನಾನು ಶರಣಾಗತನಾಗಬೇಕಿದೆ. ಅವರು ಈ ಬಾರಿ ನನ್ನನ್ನು ಎಷ್ಟು ದಿನ ಜೈಲಿನಲ್ಲಿರಿಸಿಕೊಳ್ಳುತ್ತಾರೆ ಎಂಬುದು ತಿಳಿದಿಲ್ಲ. ನಾನು ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಜೈಲಿಗೆ ಹೋಗುತ್ತಿದ್ದೇನೆ. ನನಗಿದಕ್ಕೆ ಹೆಮ್ಮೆಯಿದೆ. ಅವರು ಹಲವಾರು ಬಾರಿ ನನ್ನನ್ನು ಬಗ್ಗಿಸಲು ಹಾಗೂ ನಾನು ಅವರ ಮುಂದೆ ತಲೆ ಬಾಗುವಂತೆ ಮಾಡಲು ಪ್ರಯತ್ನಿಸಿದರು. ಆದರೆ, ನಾನು ಬಾಗಲಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಅವರು, ತಮ್ಮ ವಯೋವೃದ್ಧ ಪೋಷಕರಿಗಾಗಿ ಪ್ರಾರ್ಥಿಸುವಂತೆ ಜನತೆಗೆ ಕರೆ ನೀಡಿದ್ದಾರೆ.