ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನ, ಬೆಳ್ಳಿ ದರ

Update: 2024-04-09 04:00 GMT

Photo: PTI

ಮುಂಬೈ: ಅಮೂಲ್ಯ ಲೋಹಗಳ ಬೆಲೆ  ಏರಿಕೆಯಾಗುತ್ತಿದ್ದು, ಸೋಮವಾರ ಒಂದೇ ದಿನ ಚಿನ್ನದ ಬೆಲೆ 10 ಗ್ರಾಂ ಗೆ 1500 ರೂಪಾಯಿ ಏರಿಕೆಯಾಗಿದೆ. ಮೊದಲ ಬಾರಿಗೆ 10 ಗ್ರಾಂ ಚಿನ್ನದ ಬೆಲೆ 70 ಸಾವಿರದ ಗಡಿ ದಾಟಿ 71100 ರೂಪಾಯಿ ತಲುಪಿದೆ. ಭೌಗೋಳಿಕ ಹಾಗೂ ರಾಜಕೀಯ ಅಪಾಯ ಸಾಧ್ಯತೆಗಳು ಮತ್ತು ಕೇಂದ್ರೀಯ ಬ್ಯಾಂಕ್ ಗಳಿಂದ ಖರೀದಿ ಭರಾಟೆಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಗಗನಮುಖಿಯಾಗಿದೆ. ಬೆಳ್ಳಿ ಕೂಡಾ ಇದರಲ್ಲಿ ಪಾಲು ಪಡೆದಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನ ಬೆಳ್ಳಿಯ ಬೆಲೆ 2000 ರೂಪಾಯಿ ಹೆಚ್ಚಳಗೊಂಡಿದ್ದು, ಕೆ.ಜಿ. ಬೆಳ್ಳಿ ಬೆಲೆ 80 ಸಾವಿರದ ಗಡಿ ದಾಟಿ 81200 ರೂಪಾಯಿ ತಲುಪಿದೆ.

ಆದರೆ ಈ ಭಾರಿ ಬೆಲೆ ಏರಿಕೆ ಆಭರಣ ಮಳಿಗೆಗಳ ವ್ಯವಹಾರಕ್ಕೆ ಪೆಟ್ಟು ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ವ್ಯಾಪಾರ ಶೇಕಡ 50ರಷ್ಟು ಕುಸಿದಿದೆ ಎಂದು ಆಭರಣ ವ್ಯಾಪಾರಿಗಳು ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇತ್ತೀಚೆಗೆ ಔನ್ಸ್ ಗೆ 2300 ಡಾಲರ್ ತಲುಪಿತ್ತು. ಆದರೆ ಸೋಮವಾರ ವಹಿವಾಟಿನ ಮಧ್ಯದಲ್ಲಿ ಒಮ್ಮೆ 2400 ಡಾಲರ್ ಗಡಿ ದಾಟಿತು. ಬೆಳ್ಳಿಯ ಬೆಲೆ ಮೂರು ವರ್ಷದ ಗರಿಷ್ಠ ಮಟ್ಟವನ್ನು ತಲುಪಿ ಔನ್ಸ್ ಗೆ 28 ಡಾಲರ್ ದಾಖಲಾಯಿತು. ಒಂದು ಔನ್ಸ್ ಅಂದರೆ 31.1 ಗ್ರಾಂ.

ಹಳದಿ ಲೋಹದ ಅತ್ಯಧಿಕ ಬೆಲೆಯಿಂದಾಗಿ ಆಭರಣಗಳ ಬೇಡಿಕೆ ತೀವ್ರವಾಗಿ ಕುಸಿದಿದೆ. ಮೊದಲ ತ್ರೈಮಾಸಿಕದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಹಿವಾಟು ತೀವ್ರವಾಗಿ ಕುಸಿದಿದೆ ಎನ್ನುವುದು ಚಿಲ್ಲರೆ ಆಭರಣ ಮಾರಾಟಗಾರರಿಂದ ಪಡೆದ ಮಾಹಿತಿಯಿಂದ ಸ್ಪಷ್ಟವಾಗುತ್ತದೆ ಎಂದು ಇಂಡಿಯಾ, ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಓ ಸಚಿನ್ ಜೈನ್ ಹೇಳಿದ್ದಾರೆ.

ಇದರ ಜತೆಗೆ ಭಾರತದಲ್ಲಿ ಚುನಾವಣೆಯ ಅವಧಿ ಎರಡು ತಿಂಗಳು ವಿಸ್ತರಿಸಿರುವುದರಿಂದ, ಚಿನ್ನ ಮತ್ತು ನಗದು ಸಾಗಾಣಿಕೆಯ ಮೇಲೆ ತೀವ್ರ ನಿಗಾ ವಹಿಸಿರುವುದು ಕೂಡಾ ಬೇಡಿಕೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಜೈನ್ ವಿಶ್ಲೇಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News