ಹಣಕಾಸಿನ ವಹಿವಾಟುಗಳಿಗೆ ಸಾರ್ವಜನಿಕ ವೈಫೈ ಬಳಸಬೇಡಿ: ಜನರಿಗೆ ಕೇಂದ್ರ ಸರಕಾರ ಸಲಹೆ

Update: 2025-04-27 19:10 IST
ಹಣಕಾಸಿನ ವಹಿವಾಟುಗಳಿಗೆ ಸಾರ್ವಜನಿಕ ವೈಫೈ ಬಳಸಬೇಡಿ: ಜನರಿಗೆ ಕೇಂದ್ರ ಸರಕಾರ ಸಲಹೆ

ಸಾಂದರ್ಭಿಕ ಚಿತ್ರ | Freepik

  • whatsapp icon

ಹೊಸದಿಲ್ಲಿ: ಹಣಕಾಸಿನ ವಹಿವಾಟು ಮತ್ತು ಇತರ ಸೂಕ್ಷ್ಮ ವ್ಯವಹಾರಗಳಿಗೆ ಸಾರ್ವಜನಿಕ ವೈಫೈ ನೆಟ್ವರ್ಕ್‌ಗಳನ್ನು ಬಳಸದಂತೆ ನಾಗರಿಕರಿಗೆ ಸರಕಾರ ಸಲಹೆಯನ್ನು ನೀಡಿದೆ.

ವಿಮಾನ ನಿಲ್ದಾಣಗಳು, ಕಾಫಿ ಶಾಪ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ಉಚಿತ ವೈಫೈ ಸೇವೆಗಳು ಅನುಕೂಲಕರವಾಗಿಬಹುದು. ಆದರೆ, ಇದು ವೈಯಕ್ತಿಕ ಮತ್ತು ಬ್ಯಾಂಕಿಂಗ್ ವ್ಯವಹಾರಗಳಿಗೆ ಗಮನಾರ್ಹ ಅಪಾಯಗಳನ್ನು ಉಂಟುಮಾಡುವ ಸಾಧ್ಯತೆ ಇದೆ.

ಡಿಜಿಟಲ್ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಇಂಡಿಯನ್‌ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್(CERT-In) ತನ್ನ 'ಜಾಗೃತಿ ದಿನದ' ಭಾಗವಾಗಿ ಹೊಸ ಸಲಹೆಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕ ವೈಫೈ ನೆಟ್ವರ್ಕ್‌ಗಳಲ್ಲಿ ಸೂಕ್ಷ್ಮ ವಹಿವಾಟುಗಳನ್ನು ನಡೆಸುವುದನ್ನು ತಡೆಯುವಂತೆ ನಾಗರಿಕರನ್ನು ಒತ್ತಾಯಿಸಿದೆ. ಅಸುರಕ್ಷಿತ ಸಾರ್ವಜನಿಕ ವೈಫೈ ಮೂಲಕ ಬ್ಯಾಂಕಿಂಗ್ ಅಥವಾ ಆನ್‌ಲೈನ್‌ ಶಾಪಿಂಗ್ ಮಾಡದಂತೆ ಸಲಹೆ ನೀಡಿದೆ.

ಸೈಬರ್ ಅಪರಾಧಿಗಳು ಸಾರ್ವಜನಿಕ ನೆಟ್ವರ್ಕ್‌ಗಳ ಮೂಲಕ ನಡೆಸುವ ವ್ಯವಹಾರಗಳನ್ನು ಅಡ್ಡಿಪಡಿಸಬಹುದು. ಇದು ಬಳಕೆದಾರರ ದತ್ತಾಂಶ ಕಳ್ಳತನ, ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಇಂತಹ ನೆಟ್ವರ್ಕ್‌ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ನಮೂದಿಸುವುದನ್ನು ಅಥವಾ ವಹಿವಾಟು ನಡೆಸುವುದನ್ನು ತಪ್ಪಿಸುವಂತೆ ನಾಗರಿಕರಲ್ಲಿ ಮನವಿ ಮಾಡಲಾಗಿದೆ.

ಜಾಗೃತಿ ಅಭಿಯಾನದ ಭಾಗವಾಗಿ CERT-In ನಾಗರಿಕರು ಅನುಸರಿಸಬೇಕಾದ ಅಗತ್ಯ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಅನಾಮಧೇಯ ಮೂಲಗಳಿಂದ ಬರುವ ಲಿಂಕ್‌ಗಳನ್ನು ತೆರೆಯಬಾರದು. ನಿಮ್ಮ ಆನ್‌ಲೈನ್‌ ಖಾತೆಗಳಿಗಾಗಿ ಕಠಿಣ ಪಾಸ್‌ವರ್ಡ್‌ಗಳನ್ನು ಬಳಸಬೇಕು. ಇದು ವೈಯಕ್ತಿಕ ದಾಖಲೆಗಳ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ಇದಲ್ಲದೆ ಸಾರ್ವಜನಿಕ ವೈಫೈನಲ್ಲಿ ಇಮೇಲ್‌ಗಳನ್ನು ಪರಿಶೀಲಿಸುವುದು ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಲಾಗಿನ್ ಮಾಡುವುದರಿಂದ ಅಪಾಯವಿದೆ ಎಂದು ತಿಳಿಸಿದೆ.

CERT-In ಭಾರತದಲ್ಲಿ ಸೈಬರ್ ಭದ್ರತೆಯ ಜವಾಬ್ದಾರಿಯುತ ರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News