ಗುಜರಾತ್: ಎಮ್ಮೆಗಳ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಗುಂಪು
ಹೊಸದಿಲ್ಲಿ: ಎಮ್ಮೆಗಳ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ʼನಕಲಿ ಗೋರಕ್ಷಕʼರ ತಂಡವೊಂದು ಥಳಿಸಿ ಹತ್ಯೆಗೈದ ಘಟನೆ ಗುಜರಾತ್‌ನ ಬಾನಸ್ಕಂತ ಜಿಲ್ಲೆಯಿಂದ ಗುರುವಾರ ವರದಿಯಾಗಿದೆ. ಇದೊಂದು ಗುಂಪು ಥಳಿತ ಪ್ರಕರಣ ಎಂದು ಅಲ್ಪಸಂಖ್ಯಾತರ ಹಕ್ಕು ಸಂಘಟನೆಗಳು ಹೇಳಿದರೆ ಪೊಲೀಸರು ಅದನ್ನು ನಿರಾಕರಿಸಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳ ಪೈಕಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಾನಸ್ಕಂತದ ಸೇಸನ್ ನವಾ ಗ್ರಾಮದ ನಿವಾಸಿ ಮಿಶ್ರಿಖಾನ್ ಬಲೋಚ್ ಹತ್ಯೆಗೀಡಾದವರು. ಗುರುವಾರ ಮಿಶ್ರಿಖಾನ್ ಮತ್ತು ಗ್ರಾಮದ ಹುಸೈನ್‌ಖಾನ್ ಹಜ್ಜಿಬಾಬುಖಾನ್ ಬಲೋಚ್ ಎರಡು ಎಮ್ಮೆಗಳೊಂದಿಗೆ ದೀಸಾ ಪಟ್ಟಣದ ಪ್ರಾಣಿಗಳ ಮಾರುಕಟ್ಟೆಯತ್ತ ಸಾಗುತ್ತಿರುವ ವೇಳೆ ಅವರ ವಾಹನದ ಟಯರ್ ಪಂಕ್ಚರ್ ಆಗಿತ್ತು.
ಆ ಸಂದರ್ಭದಲ್ಲಿ ಎಸ್‌ಯುವಿ ಒಂದರಲ್ಲಿ ಆಗಮಿಸಿದ ಆರೋಪಿಗಳು ಅವರನ್ನು ನಿಂದಿಸಲು ಆರಂಭಿಸಿ ನಂತರ ಬೆದರಿಸಿದಾಗ ಇಬ್ಬರೂ ಅಲ್ಲಿಂದ ಪಲಾಯನಗೈಯ್ಯಲು ಯತ್ನಿಸಿದರೂ ಅವರ ವಾಹನದ ಟಯರ್ ಸ್ಫೋಟಗೊಂಡಿತ್ತು. ಹುಸೈನ್‌ಖಾನ್ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾದರೂ ಮಿಶ್ರಿಖಾನ್ ಆರೋಪಿಗಳ ಕೈಗೆ ಸಿಕ್ಕಿಬಿದ್ದ ಕಾರಣ ಆತನಿಗೆ ರಾಡ್, ತಲವಾರುಗಳಿಂದ ಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟನೆಂದು ಶಂಕಿಸಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಜಗತ್‌ಸಿಂಗ್ ಮತ್ತು ಹಮೀರ್‌ಭಾಯಿ ಎಂಬ ಇಬ್ಬರನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ಮುಂದುವರಿದಿದೆ.
ಆರೋಪಿಗಳು ಮತ್ತು ಸಂತ್ರಸ್ತರ ನಡುವೆ ಈ ಹಿಂದೆಯೂ ಚಕಮಕಿ ನಡೆದಿತ್ತೆಂದು ತಿಳಿದು ಬಂದಿದೆ.