ಗುಜರಾತ್: ಕೇಂದ್ರ ಸಚಿವ ವಿರುದ್ಧ ಕ್ಷತ್ರಿಯರ ಬೃಹತ್ ಪ್ರತಿಭಟನೆ
ಅಹ್ಮದಾಬಾದ್: ಹಿರಿಯ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಪರ್ಷೋತ್ತಮ್ ರುಪಾಲಾ ಅವರನ್ನು ಪಕ್ಷದ ಉಮೇದುವಾರಿಕೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ರಾಜಕೋಟ್ ನಲ್ಲಿ ಕ್ಷತ್ರಿಯ ಸಮುದಾಯದವರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏಪ್ರಿಲ್ 19ರ ಒಳಗಾಗಿ ಅವರ ಉಮೇದುವಾರಿಕೆಯನ್ನು ವಜಾ ಮಾಡುವಂತೆ ಬಿಜೆಪಿ ಮುಖಂಡರಿಗೆ ಗಡುವು ನೀಡಲಾಗಿದೆ. ಇಲ್ಲದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದಿನ ರಾಜರು ಬ್ರಿಟಿಷರ ಜತೆ ಕೈಜೋಡಿಸಿ ಅವರ ಹೆಣ್ಣುಮಕ್ಕಳನ್ನು ವಿವಾಹವಾದರು ಎಂದು ರಾಜ್ ಕೋಟ್ ಬಿಜೆಪಿ ಅಭ್ಯರ್ಥಿಯಾಗಿರುವ ರುಪಾಲಾ ಮಾರ್ಚ್ 22ರಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಇದರ ವಿರುದ್ಧ ಕ್ಷತ್ರಿಯ ಸಮುದಾಯ ತಿರುಗಿ ಬಿದ್ದಿದೆ. ರುಪಾಲಾ ಅವರು ಪಾಟಿದಾರ್ ಸಮುದಾಯದ ಕಡ್ವಾ ಉಪ ಪಂಗಡದವರಾಗಿದ್ದು, ಅವರ ವಿರುದ್ಧದ ಕ್ಷತ್ರಿಯ ಪ್ರತಿಭಟನೆ ಗುಜರಾತ್ ನ ಆಚೆಗೂ ಪ್ರತಿಧ್ವನಿಸಿದೆ.
ರಾಜ್ ಕೋಟ್ ನ ರತ್ನಪುರದಲ್ಲಿ ವಿವಿಧ ರಜಪೂತ ಸಂಘಟನೆಗಳನ್ನೊಳಗೊಂಡ ಸಮನ್ವಯ ಸಮಿತಿ 13 ಎಕರೆ ಪ್ರದೇಶದಲ್ಲಿ ಬೃಹತ್ ರ್‍ಯಾಲಿ ನಡೆಸಿತು. ಗುಜರಾತ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ್ದ ಸುಮಾರು ಎರಡು ಲಕ್ಷ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮೂಲಗಳು ಹೇಳಿವೆ.
ಹಲವು ಬಾರಿ ಈ ವಿಚಾರದಲ್ಲಿ ರುಪಾಲಾ ಕ್ಷಮೆ ಯಾಚಿಸಿದ್ದು, ಏಪ್ರಿಲ್ 16ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. ರುಪಾಲಾ ಅವರನ್ನು ಸ್ಪರ್ಧಾಕಣದಿಂದ ಹಿಂದೆ ಸರಿಸಬೇಕು ಎಂದು ಪಟ್ಟು ಹಿಡಿದಿರುವ ರಜಪೂತ ಸಮಾಜ, ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದೆ. ರುಪಾಲಾ ಅವರನ್ನು ಕಣದಿಂದ ಹಿಂದೆ ಸರಿಸಿದರೆ ಪ್ರಭಾವಿ ಪಾಟಿದಾರ ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಚಿಂತೆ ಬಿಜೆಪಿ ಮುಖಂಡರದ್ದು.