ಹಜ್ ಸುವಿಧಾ ಆ್ಯಪ್ ಗೆ ಚಾಲನೆ, ಹಜ್ ಗೈಡ್ ಬಿಡುಗಡೆ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

Update: 2024-03-04 12:31 GMT

ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ರವಿವಾರ ಇಲ್ಲಿ ಹಜ್ ಸುವಿಧಾ ಆ್ಯಪ್ ಗೆ ಚಾಲನೆ ನೀಡಿದರು. ಈ ಆ್ಯಪ್ ಹಜ್ ಯಾತ್ರೆಯನ್ನು ಕೈಗೊಳ್ಳುವವರಿಗೆ ಅಗತ್ಯ ಮಾಹಿತಿಗಳು ಹಾಗೂ ತರಬೇತಿ ಮಾಡ್ಯೂಲ್ಗಳು, ವಿಮಾನಯಾನ ವಿವರಗಳು, ತುರ್ತು ಸಹಾಯವಾಣಿ, ಆರೋಗ್ಯ ಮತ್ತು ವಸತಿ ಸೌಲಭ್ಯಗಳಂತಹ ಪ್ರಮುಖ ಸೇವೆಗಳಿಗೆ ನೇರ ಪ್ರವೇಶವನ್ನು ಒದಗಿಸುತ್ತದೆ.

ಇರಾನಿ ಅವರು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಹಜ್ 2024ರ ಸಿದ್ಧತೆಗಳ ಅಂಗವಾಗಿ ಎರಡು ದಿನಗಳ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಜಾನ್ ಬಾರ್ಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 550ಕ್ಕೂ ಅಧಿಕ ತರಬೇತುದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ತರಬೇತುದಾರರ ತರಬೇತಿ ಕಾರ್ಯಕ್ರಮವು ಹಜ್ ಯಾತ್ರಿಗಳಿಗೆ ತೃಪ್ತಿಕರ ಅನುಭವ ಮತ್ತು ಯಾತ್ರೆಯ ವಿವಿಧ ಅಂಶಗಳ ಬಗ್ಗೆ ತಿಳುವಳಿಕೆಯನ್ನು ಖಚಿತಪಡಿಸಲು ಅವರಿಗೆ ಹೆಚ್ಚಿನ ತರಬೇತಿಯನ್ನು ನೀಡುವ ತರಬೇತುದಾರರನ್ನು ಸಂವೇದನಾಶೀಲರನ್ನಾಗಿಸುವ ಮತ್ತು ಶಿಕ್ಷಿತರನ್ನಾಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿಕೆಯು ತಿಳಿಸಿದೆ.

ಹಜ್ ಅನ್ನು ಸುಗಮಗೊಳಿಸುವ ಮತ್ತು ಹೆಚ್ಚು ಆರಾಮದಾಯಕ ಅನುಭವವಾಗಿಸುವ ಸರಕಾರದ ಪ್ರಯತ್ನಗಳ ಭಾಗವಾಗಿ ಸಚಿವೆ ಇರಾನಿ ಎಲ್ಲ ಹಜ್ ಯಾತ್ರಿಗಳ ಅನುಕೂಲಕ್ಕಾಗಿ ಹಜ್ ಸುವಿಧಾ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಸಮರ್ಥ ಮಾರ್ಗದರ್ಶನದಡಿ ಬಿಐಎಸ್ಎಜಿ-ಎನ್ ಅಭಿವೃದ್ಧಿಗೊಳಿಸಿರುವ ಈ ಆ್ಯಪ್ ಯಾತ್ರೆಯ ಅನುಭವದಲ್ಲಿ ಮಹತ್ತರ ಬದಲಾವಣೆಯನ್ನು ತರಲಿದೆ. ಇರಾನಿಯವರು ಹಜ್ ಮಾರ್ಗದರ್ಶಿ 2024ನ್ನೂ ಬಿಡುಗಡೆಗೊಳಿಸಿದ್ದು, 10 ಭಾಷೆಗಳಲ್ಲಿ ಪ್ರಕಟಗೊಂಡಿರುವ ಇದನ್ನು ಎಲ್ಲ ಹಜ್ ಯಾತ್ರಿಗಳಿಗೆ ಒದಗಿಸಲಾಗುವುದು ಎಂದು ಹೇಳಿಕೆಯು ತಿಳಿಸಿದೆ.

ಯಾತ್ರಿಗಳು ತಮ್ಮ ಯಾತ್ರೆಯ ಮೇಲೆ ಹೆಚ್ಚಿನ ಗಮನವನ್ನು ಹರಿಸಲು ಆ್ಯಪ್ ನೆರವಾಗಲಿದೆ. ಯಾತ್ರಿಗಳು ತಮ್ಮ ಪ್ರಯಾಣದ ಸಂದರ್ಭದಲ್ಲಿ ಎದುರಿಸುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಮತ್ತು ವಿಶೇಷವಾಗಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಹಜ್ ಯಾತ್ರೆಯನ್ನು ಕೈಗೊಳ್ಳುವವರಿಗೆ ವರದಾನವಾಗಲಿದೆ ಎಂದು ಹೇಳಿಕೆಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News