ಹರ್ಯಾಣ: ಬಿಡಿಭಾಗ ಉತ್ಪಾದನಾ ಘಟಕದಲ್ಲಿ ಬಾಯ್ಲರ್ ಸ್ಫೋಟ: 40 ಮಂದಿಗೆ ಗಾಯ

Update: 2024-03-17 04:07 GMT

Photo: twitter.com/VistaarNews

ಚಂಡೀಗಢ : ಹರ್ಯಾಣದ ರೇವಾರಿ ಜಿಲ್ಲೆಯ ಧರುಹೆರಾ ಕೈಗಾರಿಕಾ ಪ್ರದೇಶದ ಬಿಡಿಭಾಗಗಳ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಿಂದ ಕನಿಷ್ಠ 40 ಮಂದಿ ಗಾಯಗೊಂಡಿದ್ದು, ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ಈ ದುರಂತ ಸಂಭವಿಸಿದ್ದು, ಇದುವರೆಗೆ ಯಾವುದೇ ಸಾವು-ನೋವಿನ ಬಗ್ಗೆ ವರದಿ ಬಂದಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.

ಲೈಫ್ ಲಾಂಗ್ ಕಂಪನಿ ಹೆಸರಿನ ಫ್ಯಾಕ್ಟರಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದರು. ರೇವಾರಿ ಸಿವಿಲ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಗಳೂ ಧಾವಿಸಿದವು.

"ಸುಮಾರು 40 ಮಂದಿ ಕಾರ್ಮಿಕರು ರೇವಾರಿ, ಧರುಹೆರಾ, ಗುರುಗ್ರಾಮ ಮತ್ತು ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಸಬ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಹೇಳಿದ್ದಾರೆ. ಎಲ್ಲ ಕಾರ್ಮಿಕರ ಆರೋಗ್ಯಸ್ಥಿತಿ ಸ್ಥಿರವಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದು, ಈ ಪೈಕಿ 23 ಮಂದಿ ರೇವಾರಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರರನ್ನು ಧರುಹೆರಾ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಂಭೀರ ಗಾಯಗಳಾಗಿರುವ ಒಬ್ಬರನ್ನು ರೋಹ್ಟಕ್ ಪಿಜಿಐಎಂಎಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇತರ ಎಲ್ಲ ಆಸ್ಪತ್ರೆಗಳಿಗೂ ಮಾಹಿತಿ ನೀಡಲಾಗಿದ್ದು, ಅಲ್ಲಿಂದ ಇಬ್ಬರನ್ನು ಕೂಡಾ ಪಿಜಿಐಎಂಎಸ್ ಗೆ ಕಳುಹಿಸಲಾಗಿದೆ ಎಂದು ಸಿವಿಲ್ ಸರ್ಜನ್ ಡಾ.ಸುರೇಂದ್ರ ಯಾದವ್ ವಿವರಿಸಿದ್ದಾರೆ.

ಕೆಲ ಕಾರ್ಮಿಕರಿಗೆ ಶೇಕಡ 70ಕ್ಕಿಂತ ಹೆಚ್ಚು ಸುಟ್ಟಗಾಯಗಳಾಗಿವೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ. "ಸಂಜೆ 7 ಗಂಟೆಯ ವೇಳೆಗೆ ದಿಢೀರನೇ ಸ್ಫೋಟದ ಸದ್ದು ಕೇಳಿಬಂತು" ಎಂದು ಮನೀಶ್ ಕುಮಾರ್ ಎಂಬ ಕಾರ್ಮಿಕ ಘಟನೆಯ ವಿವರ ನೀಡಿದ್ದಾರೆ. ಈ ವೇಳೆ 150 ಮಂದಿ ಕಾರ್ಮಿಕರು ಇದ್ದರು. ಸ್ಫೋಟದ ಕಾರಣ ತಿಳಿದು ಬಂದಿಲ್ಲ. ಕನಿಷ್ಠ 40 ಮಂದಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇನ್ನೂ ಕೆಲವರು ಫ್ಯಾಕ್ಟರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನುವುದು ಕಾರ್ಮಿಕರ ಆರೋಪ. ಆದರೆ ಇದನ್ನು ಪೊಲೀಸರು ನಿರಾಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News