ಈಗ ಮಕ್ಕಳನ್ನು ಹೆರಲು ಸಜ್ಜಾಗುವಂತೆ ನವವಿವಾಹಿತರಿಗೆ ಸಂದೇಶ ; ಕ್ಷೇತ್ರ ಪುನರ್ವಿಂಗಡಣೆ ಕುರಿತು ಸ್ಟಾಲಿನ್ ವ್ಯಂಗ್ಯ

Update: 2025-03-03 16:37 IST
ಈಗ ಮಕ್ಕಳನ್ನು ಹೆರಲು ಸಜ್ಜಾಗುವಂತೆ ನವವಿವಾಹಿತರಿಗೆ ಸಂದೇಶ  ; ಕ್ಷೇತ್ರ ಪುನರ್ವಿಂಗಡಣೆ ಕುರಿತು ಸ್ಟಾಲಿನ್ ವ್ಯಂಗ್ಯ

ಎಂ.ಕೆ.ಸ್ಟಾಲಿನ್ | PTI

  • whatsapp icon

ಚೆನ್ನೈ : ಕೇಂದ್ರದ ಕ್ಷೇತ್ರ ಪುನರ್ವಿಂಗಡಣೆ ಯೋಜನೆಗಳನ್ನು ವ್ಯಂಗ್ಯವಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪುನರ್ವಿಂಗಡಣೆ ಪ್ರಕ್ರಿಯೆಯು ನಡೆದಾಗ ರಾಜ್ಯಕ್ಕೆ ಅನುಕೂಲವಾಗುವಂತೆ ಮಕ್ಕಳನ್ನು ಹೆರಲು ಸಜ್ಜಾಗುವಂತೆ ನವವಿವಾಹಿತರನ್ನು ಆಗ್ರಹಿಸಿದ್ದಾರೆ.

ನಾಗಪಟ್ಟಿಣಂನಲ್ಲಿ ಡಿಎಂಕೆ ಜಿಲ್ಲಾ ಕಾರ್ಯದರ್ಶಿಯ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸ್ಟಾಲಿನ್,‘ನಾನು ಈ ಹಿಂದೆ ವಿಳಂಬವಾಗಿ ಮಕ್ಕಳನ್ನು ಪಡೆಯುವಂತೆ ನವವಿವಾಹಿತರಿಗೆ ಸಲಹೆ ನೀಡುತ್ತಿದ್ದೆ. ಆದರೆ ಈಗ ಕೇಂದ್ರ ಸರಕಾರವು ಜಾರಿಗೆ ತರಲು ಯೋಜಿಸುತ್ತಿರುವ ಕ್ಷೇತ್ರ ಪುನರ್ವಿಂಗಡಣೆಯಂತಹ ನೀತಿಗಳಿಂದಾಗಿ ನಾನು ಹಾಗೆ ಹೇಳುವಂತಿಲ್ಲ. ನಾವು ಕುಟುಂಬ ಯೋಜನೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದೆವು, ಅದರಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಇಂತಹ ಸ್ಥಿತಿಗೆ ತಳ್ಳಲ್ಪಟ್ಟಿದ್ದೇವೆ. ಜನಸಂಖ್ಯೆ ನಿಯಂತ್ರಣದಲ್ಲಿರುವುದರಿಂದ ಪುನರ್ವಿಂಗಡಣೆ ನಡೆದಾಗ ರಾಜ್ಯದ ಲೋಕಸಭಾ ಕ್ಷೇತ್ರಗಳು ಕಡಿಮೆಯಾಗುತ್ತವೆ. ಹೀಗಾಗಿ ತಕ್ಷಣವೇ ಮಕ್ಕಳನ್ನು ಹೆರುವಂತೆ ಮತ್ತು ಅವರಿಗೆ ಒಳ್ಳೆಯ ತಮಿಳು ಹೆಸರುಗಳನ್ನು ಇಡುವಂತೆ ನಾನು ನವವಿವಾಹಿತರನ್ನು ಆಗ್ರಹಿಸುತ್ತೇನೆ ’ ಎಂದು ಹೇಳಿದರು.

ಕೇಂದ್ರ ಸರಕಾರವು ಕೈಗೊಳ್ಳಲು ಉದ್ದೇಶಿಸಿರುವ ಕ್ಷೇತ್ರ ಪುನರ್ವಿಂಗಡಣೆಯನ್ನು ವಿರೋಧಿಸುವಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮುಂಚೂಣಿಯಲ್ಲಿದೆ. 2026ರ ನಂತರ ನಡೆಯುವ ನಿರೀಕ್ಷೆಯಿರುವ ಕೇತ್ರ ಪುನರ್ವಿಂಗಡಣೆಯಿಂದಾಗಿ ದಕ್ಷಿಣದ ರಾಜ್ಯಗಳಿಗೆ ಲೋಕಸಭಾ ಕ್ಷೇತ್ರಗಳ ನಷ್ಟವಾಗುತ್ತದೆ ಮತ್ತು ಸಂಸತ್ತಿನಲ್ಲಿ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎನ್ನುವುದು ಡಿಎಂಕೆ ನಾಯಕ ಸ್ಟಾಲಿನ್ ಅವರ ವಾದವಾಗಿದೆ.

ದಕ್ಷಿಣದ ರಾಜ್ಯಗಳು ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿವೆ ಮತ್ತು ಜನಸಂಖ್ಯೆಯಲ್ಲಿ ಬದಲಾವಣೆಯನ್ನು ಆಧರಿಸಿ ಪುನರ್ವಿಂಗಡಣೆ ನಡೆದಾಗ ಕುಟುಂಬ ಯೋಜನೆಯಲ್ಲಿ ಸಾಧಿಸಿದ ಯಶಸ್ಸು ಅವುಗಳ ವಿರುದ್ಧವಾಗಿ ಕೆಲಸ ಮಾಡಬಹುದು ಮತ್ತು ಅವು ಗಣನೀಯ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಇದು ದೇಶದ ಕಲ್ಯಾಣಕ್ಕಾಗಿ ಜನಸಂಖ್ಯಾ ನಿಯಂತ್ರಣದಲ್ಲಿ ಅವುಗಳ ಗಮನಾರ್ಹ ಸಾಧನೆ ಮತ್ತು ದೇಶದ ಜಿಡಿಪಿಗೆ ಗಣನೀಯ ಕೊಡುಗೆಯ ಹೊರತಾಗಿಯೂ ಸಂಸತ್ತಿನಲ್ಲಿ ಅವುಗಳ ಪ್ರಾತಿನಿಧ್ಯವನ್ನು ತಗ್ಗಿಸುತ್ತದೆ ಎಂದು ಸ್ಟಾಲಿನ್ ವಾದಿಸಿದ್ದಾರೆ.

ಸ್ಟಾಲಿನ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಿ.ಆರ್.ಕೇಶವನ್ ಅವರು, ತನ್ನ ದುರಾಡಳಿತದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿ ಹತಾಶ ಮತ್ತು ಅಪ್ರಾಮಾಣಿಕ ನಾಟಕವಾಡುತ್ತಿರುವ ಡಿಎಂಕೆಗೆ ರಾಹುಲ್ ಗಾಂಧಿಯವರ ‘ಜಿತ್ನಾ ಆಬಾದಿ,ಉತ್ನಾ ಹಕ್(ಜನಸಂಖ್ಯೆ ಎಷ್ಟಿದೆಯೋ ಅಷ್ಟು ಹಕ್ಕು)’ ಎಂಬ ಕರೆಯನ್ನು ಪ್ರಶ್ನಿಸುವ ಮತ್ತು ವಿವರಣೆಯನ್ನು ಕೇಳುವ ಧೈರ್ಯವಿದೆಯೇ? ರಾಹುಲ್ ಗಾಂಧಿಯವರ ಈ ಕರೆ ಡಿಎಂಕೆ ಹೇಳುತ್ತಿರುವುದಕ್ಕೆ ವ್ಯತಿರಿಕ್ತವಾಗಿದೆ ಎಂದು ಹೇಳಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ಕುರಿತು ತಮಿಳುನಾಡಿನ ನಿಲುವನ್ನು ಚರ್ಚಿಸಲು ಸ್ಟಾಲಿನ್ ಮಾ.5ರಂದು ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News