ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

Update: 2024-06-24 06:08 GMT

Photo credit: ANI

ಹೊಸದಿಲ್ಲಿ: 18ನೇ ಲೋಕಸಭೆಯ ನೂತನ ಸಂಸದರಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹ್ತಾಬ್ ಪ್ರಮಾಣ ವಚನ ಬೋಧಿಸಿದರು.

ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಂಗಾಮಿ ಸ್ಪೀಕರ್ ಭರ್ತೃಹರಿ ಮಹ್ತಾಬ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಹಂಗಾಮಿ ಸ್ಪೀಕರ್ ಆಯ್ಕೆಯಲ್ಲಿ ಹಿರಿತನವನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಆರೋಪಿಸಿದ್ದರಿಂದ ಹಂಗಾಮಿ ಸ್ಪೀಕರ್ ಆಯ್ಕೆಯು ವಿವಾದದ ಕೇಂದ್ರಬಿಂದುವಾಗಿ ಬದಲಾಗಿತ್ತು. ಆದರೆ, ತನ್ನ ಪಟ್ಟು ಸಡಿಲಿಸದ ಎನ್‌ಡಿಎ ಮೈತ್ರಿಕೂಟ ಸರಕಾರ, ಭರ್ತೃಹರಿ ಮಹ್ತಾಬ್ ಅವರನ್ನೇ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಇನ್ನಿತರ ನೂತನ ಚುನಾಯಿತ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ ಎಚ್‌.ಡಿ. ಕುಮಾರಸ್ವಾಮಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಕ್ತಾಯಗೊಂಡ ನಂತರ, ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಸ್ಪೀಕರ್ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News