ಮದುವೆಯಾದ 6ನೇ ದಿನಕ್ಕೆ ವಿಧವೆಯಾದ ನೌಕಾಪಡೆಯ ಅಧಿಕಾರಿಯ ಪತ್ನಿ!

Update: 2025-04-23 20:23 IST
ಮದುವೆಯಾದ 6ನೇ ದಿನಕ್ಕೆ ವಿಧವೆಯಾದ ನೌಕಾಪಡೆಯ ಅಧಿಕಾರಿಯ ಪತ್ನಿ!

PC : PTI 

  • whatsapp icon

ಹೊಸದಿಲ್ಲಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ, ಓರ್ವ ವ್ಯಕ್ತಿ ನೆಲದಲ್ಲಿ ಬಿದ್ದಿರುವ ಮತ್ತು ಪಕ್ಕದಲ್ಲಿ ಓರ್ವ ಮಹಿಳೆ ಅಳುತ್ತಾ ಕುಳಿತಿರುವ ಚಿತ್ರವೊಂದು ವ್ಯಾಪಕವಾಗಿ ವೈರಲ್ ಆಗಿದೆ. ಈ ಚಿತ್ರವು ಇಡೀ ದುರಂತದ ಪ್ರಾತಿನಿಧಿಕ ದೃಶ್ಯದಂತಾಗಿದೆ.

ಚಿತ್ರದಲ್ಲಿ ಕಾಣುವವರನ್ನು ನೌಕಾಪಡೆಯ ಲೆಫ್ಟಿನೆಂಟ್ ವಿನಯ ನರ್ವಾಲ್ ಮತ್ತು ಅವರ ಪತ್ನಿ, ಶಾಲಾ ಶಿಕ್ಷಕಿ ಹಿಮಾಂಶಿ ಎಂಬುದಾಗಿ ಈಗ ಗುರುತಿಸಲಾಗಿದೆ. ವಿನಯ ಹರ್ಯಾಣದ ಕರ್ನಲ್ ನಿವಾಸಿಯಾದರೆ, ಹಿಮಾಂಶಿ ಗುರುಗ್ರಾಮ ನಿವಾಸಿಯಾಗಿದ್ದಾರೆ.

ವಿನಯ ನರ್ವಾಲ್ರನ್ನು ಭಯೋತ್ಪಾದಕರು ಹತ್ಯೆಗೈದಿದ್ದಾರೆ. ಏನು ಮಾಡಬೇಕೆಂದು ತೋಚದೆ ಅವರ ಪಕ್ಕದಲ್ಲಿ ಕುಳಿತು ಹಿಮಾಂಶಿ ರೋದಿಸುತ್ತಿರುವುದು ಚಿತ್ರದಲ್ಲಿ ಕಾಣುತ್ತದೆ.

ಅವರ ಮದುವೆ ಕೇವಲ ಆರು ದಿನಗಳ ಹಿಂದೆ ನಡೆದಿತ್ತು. ಅವರು ಹನಿಮೂನ್ಗಾಗಿ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಜಮ್ಮುನಲ್ಲಿರುವ ಪಹಲ್ಗಾಮ್ ಪಟ್ಟಣದ ಸಮೀಪದ ಬೈಸರನ್ಗೆ ತೆರಳಿದ್ದರು. ಅವರು ಮೊದಲು ಸ್ವಿಟ್ಸರ್ಲ್ಯಾಂಡ್ಗೆ ಹೋಗುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಸರಿಯಾದ ಸಮಯಕ್ಕೆ ವೀಸಾ ಸಿಗದ ಕಾರಣ ಪಹಲ್ಗಾಮನ್ನು ಆರಿಸಿಕೊಂಡು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಈ ಚಿತ್ರವನ್ನು ಶ್ರೀನಗರದಲ್ಲಿರುವ ಸ್ಥಳೀಯ ಪತ್ರಕರ್ತರೊಬ್ಬರು ಸೆರೆಹೆಡಿದಿದ್ದು, ಪಿಟಿಐ ಸುದ್ದಿ ಸಂಸ್ಥೆ ಅದನ್ನು ವಿತರಿಸಿದೆ. ಚಿತ್ರವನ್ನು ಮೊಬೈಲ್ ಫೋನ್ ನಿಂದ ತೆಗೆಯಲಾಗಿದೆ ಎನ್ನಲಾಗಿದೆ.

ಅವರ ನಿಶ್ಚಿತಾರ್ಥ ಎಪ್ರಿಲ್ 6ರಂದು ನಡೆದಿತ್ತು. ಎಪ್ರಿಲ್ 16ರಂದು ಉತ್ತರಾಖಂಡದ ಮುಸ್ಸೋರಿಯಲ್ಲಿ ಮದುವೆಯಾಗಿತ್ತು.

ಭಯೋತ್ಪಾದಕರ ದಾಳಿಯಲ್ಲಿ ಕನಿಷ್ಠ 28 ಪ್ರವಾಸಿಗರು ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News