ಒಪ್ಪಿತ ಲೈಂಗಿಕತೆಗೆ 16 ವರ್ಷದ ಮಿತಿಯ ಸಲಹೆ ನೀಡಿದ ಹೈಕೋರ್ಟ್: 17ರ ಬಾಲಕನ ವಿರುದ್ಧದ ಅತ್ಯಾಚಾರ ಪ್ರಕರಣ ವಜಾ
14 ವರ್ಷದ ಬಾಲಕಿಯೊಬ್ಬಳು ಸಲ್ಲಿಸಿದ್ದ ದೂರನ್ನು ಆಧರಿಸಿ ಪೋಕ್ಸೊ ಕಾಯ್ದೆಯಡಿ 17 ವರ್ಷದ ಬಾಲಕನ ವಿರುದ್ಧ ದಾಖಲಿಸಿಕೊಳ್ಳಲಾಗಿರುವ ಪ್ರಕರಣದ ಕುರಿತು ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಸಲಹೆ ನೀಡಿದೆ.
ಗ್ವಾಲಿಯರ್: ಒಪ್ಪಿತ ದೈಹಿಕ ಸಂಬಂಧ ಬಗ್ಗೆ ಭಾರತದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಸದ್ಯ ನಿಗದಿಯಾಗಿರುವ ಕನಿಷ್ಠ 18 ವರ್ಷದ ವಯೋಮಾನ ಮಿತಿಯನ್ನು 16 ವರ್ಷಕ್ಕಿಳಿಸಬೇಕು ಎಂದು ಆಗ್ರಹಗಳು ಕೇಳಿ ಬರುತ್ತಿರುವ ನಡುವೆಯೇ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿ ನಿಗದಿಪಡಿಸಲಾಗಿರುವ ಒಪ್ಪಿತ ಲೈಂಗಿಕ ವಯೋಮಾನ ಮಿತಿಯನ್ನು 18 ವರ್ಷದಿಂದ 16 ವರ್ಷಕ್ಕೆ ಇಳಿಸುವುದನ್ನು ಪರಿಗಣಿಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಸಲಹೆ ನೀಡಿದೆ ಎಂದು indiatimes.com ವರದಿ ಮಾಡಿದೆ.
14 ವರ್ಷದ ಬಾಲಕಿಯೊಬ್ಬಳು ಸಲ್ಲಿಸಿದ್ದ ದೂರನ್ನು ಆಧರಿಸಿ ಪೋಕ್ಸೊ ಕಾಯ್ದೆಯಡಿ 17 ವರ್ಷದ ಬಾಲಕನ ವಿರುದ್ಧ ದಾಖಲಿಸಿಕೊಳ್ಳಲಾಗಿರುವ ಪ್ರಕರಣದ ಕುರಿತು ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಮೇಲಿನಂತೆ ಸಲಹೆ ನೀಡಿದೆ.
ಕಾಯ್ದೆಯಿಂದ ಬಾಲಕರಿಗೆ ಅನ್ಯಾಯವಾಗಿದೆ ಎಂದು ಬಣ್ಣಿಸಿರುವ ನ್ಯಾ. ಅಗರ್‌ವಾಲ್, ಈ ಹಿಂದಿನಂತೆಯೇ ಒಪ್ಪಿತ ಲೈಂಗಿಕ ವಯೋಮಾನದ ಮಿತಿಯನ್ನು 18 ವರ್ಷದಿಂದ 16 ವರ್ಷಕ್ಕೇ ತಗ್ಗಿಸಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರೊಂದಿಗೆ 17 ವರ್ಷದ ಅತ್ಯಾಚಾರ ಆರೋಪಿ ಬಾಲಕನ ವಿರುದ್ಧ ದಾಖಲಿಸಲಾಗಿದ್ದ ಪ್ರಾಥಮಿಕ ಮಾಹಿತಿ ವರದಿಯನ್ನು ವಜಾಗೊಳಿಸಿದ್ದಾರೆ.
ಇದಕ್ಕೂ ಮುನ್ನ ಒಪ್ಪಿತ ಲೈಂಗಿಕ ವಯೋಮಾನದ ಮಿತಿಯನ್ನು ಸಂಸತ್ ಮರು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಕೂಡಾ ಮನವಿ ಮಾಡಿದ್ದರು.