ಪಹಲ್ಗಾಮ್ ದಾಳಿಯ ನಂತರ ದ್ವೇಷದ ಪ್ರಚಾರಕ್ಕೆ ಸೆಡ್ಡು ಹೊಡೆದ ಹಿಂದೂ ಪ್ರವಾಸಿಯ ವಿಡಿಯೋ ವೈರಲ್

Update: 2025-04-23 21:51 IST
ಪಹಲ್ಗಾಮ್ ದಾಳಿಯ ನಂತರ ದ್ವೇಷದ ಪ್ರಚಾರಕ್ಕೆ ಸೆಡ್ಡು ಹೊಡೆದ ಹಿಂದೂ ಪ್ರವಾಸಿಯ ವಿಡಿಯೋ ವೈರಲ್

Photo | Screengrab from the video | PC: X

  • whatsapp icon

ಜಮ್ಮುಕಾಶ್ಮೀರ: ಪಹಲ್ಗಾಮ್‌ನಲ್ಲಿ ಭಯೋತ್ಪಾದನಾ ದಾಳಿಯ ನಂತರ ದೇಶದಲ್ಲಿ ಭಯ ಮತ್ತು ಆಕ್ರೋಶ ಆವರಿಸಿದೆ. ಈ ಮಧ್ಯೆ ದಾಳಿಯ ವೇಳೆ ಜಮ್ಮುಕಾಶ್ಮೀರದಲ್ಲಿದ್ದ ಮಹಾರಾಷ್ಟ್ರದ ಯುವತಿಯೋರ್ವರು ಹಂಚಿಕೊಂಡಿರುವ ತನ್ನ ಅನುಭವದ ವೀಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. ಜಮ್ಮುಕಾಶ್ಮೀರದಲ್ಲಿ ಸಹೋದರತ್ವ, ಕೋಮು ಸೌಹಾರ್ದತೆ ಇನ್ನೂ ಅಸ್ತಿತ್ವದಲ್ಲಿದೆ ಎಂಬ ಸಂದೇಶವನ್ನು ಇಡೀ ಭಾರತಕ್ಕೆ ನೀಡಿದ್ದಾರೆ.

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರ ದಾಳಿಗೆ ಪ್ರವಾಸಿಗರು ಮತ್ತು ಸ್ಥಳೀಯರು ಸೇರಿದಂತೆ ಕನಿಷ್ಠ 28 ಜನರು ಮೃತಪಟ್ಟಿದ್ದರು. ಈ ವೇಳೆ ಕಾಶ್ಮೀರದಲ್ಲಿದ್ದ ಮಹಾರಾಷ್ಟ್ರದ ಬೀಡ್‌ನ ಪ್ರವಾಸಿ ಪೂಜಾ ಜಾಧವ್ ಅವರು ʼನಾನು ಹಿಂದೂ, ಇಲ್ಲಿನ ಮುಸ್ಲಿಮರು ನಮ್ಮೊಂದಿಗಿದ್ದಾರೆʼ ಎಂದು ಹೇಳಿಕೊಂಡು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ ಪೂಜಾ ವೀಕ್ಷಕರ ಜೊತೆ ನೇರವಾಗಿ ಮಾತನಾಡುತ್ತಾ, ʼನಾನು ಹಿಂದೂ, ನಾನು ಬೆಳಿಗ್ಗೆಯಿಂದ ಕಾಶ್ಮೀರದಲ್ಲಿದ್ದೇನೆ. ನಾನು ನಿಮಗೆ ಹೇಳುತ್ತೇನೆ, ಇಲ್ಲಿನ ಮುಸ್ಲಿಮರು ನಮ್ಮೊಂದಿಗಿದ್ದಾರೆ. ಅವರು ನಮ್ಮ ಪಕ್ಕದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಯಾರೂ ನನ್ನ ಧರ್ಮ ಯಾವುದು ಎಂದು ಕೇಳಲಿಲ್ಲ, ಯಾರೂ ನಮಗೆ ಬೆದರಿಕೆ ಹಾಕಲಿಲ್ಲ ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳುತ್ತಿರುವ ಕೆಲ ಮಾಧ್ಯಮಗಳನ್ನು ಅದರಲ್ಲೂ ಮುಖ್ಯವಾಹಿನಿಯ ಟಿವಿ ವಾಹಿನಿಗಳನ್ನು ಪೂಜಾ ಜಾಧವ್ ವೀಡಿಯೊದಲ್ಲಿ ಟೀಕಿಸಿದ್ದಾರೆ.

ದಾಳಿಕೋರರು ಕಾಶ್ಮೀರದಿಂದ ಜನರನ್ನು ಹೆದರಿಸಲು ಬಯಸುತ್ತಾರೆ. ಆದರೆ ಕಾಶ್ಮೀರದ ಜನರು, ಹಿಂದೂ ಅಥವಾ ಮುಸ್ಲಿಮರಾಗಿರಲಿ ನಾವು ಇಲ್ಲಿ ಇರಬೇಕೆಂದು ಬಯಸುತ್ತಾರೆ. ಅವರು ನಮಗೆ ಸಹಾಯ ಮಾಡುತ್ತಿದ್ದಾರೆ, ನಮ್ಮನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿರುವ ನನ್ನ ಕುಟುಂಬ ಭಯೋತ್ಪಾದಕರ ದಾಳಿ ಬಗ್ಗೆ ತಿಳಿದು ಭಯಗೊಂಡಿತ್ತು. ಇಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಅವರಿಗೆ ಫೋನ್ ಮೂಲಕ ನನ್ನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇಲ್ಲಿ ನೆಟ್ವರ್ಕ್ ಸಮಸ್ಯೆಯಾಗಿದೆ. ನಾವು ಸ್ಥಳೀಯ ಸಿಮ್ ಕಾರ್ಡ್ ತೆಗೆದುಕೊಳ್ಳಬೇಕಾಗಿತ್ತು. ಆದರೆ, ನಮ್ಮ ಡ್ರೈವರ್, ಸ್ಥಳೀಯ ಸಹೋದರ ನಮ್ಮ ಪ್ರಾಣ ಇರುವವರೆಗೆ ನಿಮಗೆ ಏನೂ ಆಗಲು ಬಿಡುವುದಿಲ್ಲ ಎಂದು ಹೇಳಿದರು. ಇದು ಸಹೋದರತ್ವ. ಇದು ನಿಜವಾದ ಭಾರತ. ಇಲ್ಲಿ ಹಿಂದೂ-ಮುಸ್ಲಿಂ ಎಂಬುದಿಲ್ಲ. ನಾವೆಲ್ಲರೂ ಮನುಷ್ಯರು ಎಂದು ಅವರು ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಆಕೆಯ ಭಾವನಾತ್ಮಕ ಮಾತುಗಳು ದೇಶಾದ್ಯಂತದ ಭಾರೀ ವೈರಲ್ ಆಗಿದೆ. ಜಮ್ಮುಕಾಶ್ಮೀರದಲ್ಲಿ ಕೋಮು ಸೌಹಾರ್ದತೆ ಇನ್ನೂ ಜೀವಂತವಾಗಿದೆ ಎಂದು ಹಲವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪೊಲೀಸ್ ವರದಿಗಳ ಪ್ರಕಾರ, ಲಷ್ಕರ್-ಎ-ತೊಯ್ಬಾ ಈ ದಾಳಿಯನ್ನು ನಡೆಸಿದೆ. ಮೃತರಲ್ಲಿ ಹಲವು ರಾಜ್ಯಗಳ ಪ್ರವಾಸಿಗರು ಮತ್ತು ಇಬ್ಬರು ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಯೂ ನಡೆಯುತ್ತಿದೆ. ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಪಹಲ್ಗಾಮ್ ಮತ್ತು ಸುತ್ತಮುತ್ತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ಹಲವಾರು ಕಾಶ್ಮೀರಿ ಸ್ಥಳೀಯರು ಭಯೋತ್ಪಾದನಾ ದಾಳಿ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಮಾಯಕರ ಪ್ರಾಣಹಾನಿ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ್ದಾರೆ. ʼಪ್ರವಾಸಿಗರು ನಮ್ಮ ಅತಿಥಿಗಳು. ಅವರು ನಮ್ಮ ಕುಟುಂಬಸ್ಥರಂತೆ, ಈ ಕೃತ್ಯ ಎಸಗಿದವರಿಗೆ ಧರ್ಮ ಮತ್ತು ಆತ್ಮವಿಲ್ಲʼ ಎಂದು ಪಹಲ್ಗಾಮ್‌ನ ಇರ್ಫಾನ್ ದಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News