ಸುಳ್ಳುಗಳು,ಅರ್ಧಸತ್ಯಗಳಿಂದ ತುಂಬಿರುವ ಸಿಎಎ ಕುರಿತ ಗೃಹ ಸಚಿವಾಲಯದ ವಿವರಣೆ
- ಸಿದ್ಧಾರ್ಥ ವರದರಾಜನ್ thewire.in
ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ)ಯ ತಾರತಮ್ಯದ ಸ್ವರೂಪದ ಕುರಿತು ಆತಂಕ ನಿವಾರಿಸುವ ಪ್ರಯತ್ನವಾಗಿ ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ)ವು ಮಂಗಳವಾರ ಪ್ರಶ್ನೆಗಳು ಮತ್ತು ಉತ್ತರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆ ಇಡೀ ದಾಖಲೆಯೇ ಅತ್ಯಂತ ವಿಚಿತ್ರವಾಗಿದೆ. ಅತ್ಯಂತ ಕಳಪೆಯಾಗಿ ರಚಿಸಲ್ಪಟ್ಟಿರುವ ಅದು ಅತಾರ್ಕಿಕ ಹೇಳಿಕೆಗಳನ್ನು ಒಳಗೊಂಡಿದೆ, ಜೊತೆಗೆ ಅರ್ಧಸತ್ಯಗಳು ಮತ್ತು ಅಪ್ಪಟ ಸುಳ್ಳುಗಳಿಂದ ಕೂಡಿದೆ.
ಗೃಹ ಸಚಿವಾಲಯ ಮುಂದಿಟ್ಟಿರುವ ಪ್ರಶ್ನೆಗಳು ಮತ್ತು ಅವುಗಳಿಗೆ ಅದು ನೀಡಿರುವ ಉತ್ತರಗಳು ಮತ್ತು ಪ್ರತಿಯೊಂದು ಉತ್ತರಕ್ಕೆ ನನ್ನ ವಿಶ್ಲೇಷಣೆ (ವಾಸ್ತವ)ಯನ್ನು ನಿಮ್ಮ ಮುಂದಿಟ್ಟಿದ್ದೇನೆ.
ಅಂದ ಹಾಗೆ ಗೃಹ ಸಚಿವಾಲಯಕ್ಕೆ ಮುಜುಗರವನ್ನುಂಟು ಮಾಡಿದ್ದ ಈ ದಾಖಲೆಯನ್ನು ಈಗ ಅಳಿಸಿದೆ, ಆದರೆ ಪಿಡಿಎಫ್ ಆಗಿ ಸೇವ್ ಮಾಡಲಾಗಿದ್ದ ಮೂಲ ದಾಖಲೆ ಇಲ್ಲಿದೆ.
ಗೃಹ ಸಚಿವಾಲಯದ ಪೀಠಿಕೆ ಸ್ವರೂಪದ ಹೇಳಿಕೆ : ಸಿಎಎ ಭಾರತೀಯ ಮುಸ್ಲಿಮರು ಸ್ವಾತಂತ್ರ್ಯಾನಂತರದಲ್ಲಿ ಇತರ ಧರ್ಮಗಳಿಗೆ ಸೇರಿದ ಇತರ ಭಾರತೀಯ ಪ್ರಜೆಗಳಂತೆ ಆಚರಿಸಿಕೊಂಡು ಬಂದಿರುವ ತಮ್ಮ ಹಕ್ಕುಗಳನ್ನು ಅನುಭವಿಸುವ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಮೊಟಕುಗೊಳಿಸದೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ 2014, ಡಿ.31ಕ್ಕೆ ಮುನ್ನ ಭಾರತಕ್ಕೆ ಆಗಮಿಸಿರುವ ಫಲಾನುಭವಿಗಳಿಗೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹತಾ ಅವಧಿಯನ್ನು 11 ವರ್ಷಗಳಿಂದ ಐದು ವರ್ಷಗಳಿಗೆ ಇಳಿಸಿದೆ. ಅವರು ಅನುಭವಿಸಿರುವ ಕಿರುಕುಳಗಳಿಗೆ ಸಮಾಧಾನ ನೀಡಲು ಪರಿಹಾರವನ್ನು ಒದಗಿಸುವುದು ಕಾಯ್ದೆಯ ಉದ್ದೇಶವಾಗಿದೆ.
ವಾಸ್ತವ: ‘ಅವರು ಅನುಭವಿಸಿರುವ ಕಿರುಕುಳಗಳಿಗೆ ಸಮಾಧಾನ ನೀಡಲು ಪರಿಹಾರ ’ಅಂದರೆ ಏನು ಎನ್ನುವುದು ನನಗೆ ತಿಳಿದಿಲ್ಲ. ಆದರೆ ಈ ಹೇಳಿಕೆ ಅಪ್ರಾಮಾಣಿಕವಾಗಿದೆ. ಉದ್ದೇಶವು ನಿಜಕ್ಕೂ ಕಿರುಕುಳಕ್ಕೆ ಒಳಗಾದವರಿಗೆ ನೆರವಾಗುವುದು ಮತ್ತು ಅವರನ್ನು ಉದಾರವಾಗಿ ನಡೆಸಿಕೊಳ್ಳುವುದೇ ಆಗಿದ್ದರೆ ಸರಕಾರವು ಈ ಕೆಳಗಿನ ಪ್ರಶ್ನೆಗಳಿಗೆ ವಿವರಿಸುವ ಅಗತ್ಯವಿದೆ.
► ಪೌರತ್ವ ಸೌಲಭ್ಯವನ್ನು ಈ ಮೂರು ದೇಶಗಳ ನಿರಾಶ್ರಿತರಿಗೆ ಮಾತ್ರ ಏಕೆ ಸೀಮಿತಗೊಳಿಸಲಾಗಿದೆ?
► ರಾಜಕೀಯ ಕಿರುಕುಳ ಅಥವಾ ಜನಾಂಗೀಯತೆ ಅಥವಾ ಲಿಂಗ ಅಥವಾ ಲೈಂಗಿಕ ದೃಷ್ಟಿಕೋನದ ಕಾರಣದಿಂದ ಕಿರುಕುಳ ಸೇರಿದಂತೆ ಇತರ ರೂಪಗಳ ಕಿರುಕುಳಗಳಿಂದಾಗಿಯೂ ಈ ಮೂರು ದೇಶಗಳಿಂದ ಜನರು ಪಲಾಯನ ಮಾಡುತ್ತಿರಬಹುದು. ಹೀಗಿರುವಾಗ ಪೌರತ್ವ ನೀಡಲು ಧಾರ್ಮಿಕ ಕಿರುಕುಳವೊಂದನ್ನೇ ಏಕೆ ಪರಿಗಣಿಸಲಾಗಿದೆ?
► ಈ ದೇಶಗಳಲ್ಲಿ ನಿರ್ದಿಷ್ಟ ಮುಸ್ಲಿಂ ಪಂಗಡಗಳು ನಿಜಕ್ಕೂ ಕಿರುಕುಳಕ್ಕೊಳಗಾಗುತ್ತಿವೆ ಎನ್ನುವುದಕ್ಕೆ ಪುರಾವೆಗಳಿರುವಾಗ ಧಾರ್ಮಿಕ ಕಿರುಕುಳಕ್ಕೆ ಒಳಗಾದವರ ಪಟ್ಟಿಯಿಂದ ಮುಸ್ಲಿಮರನ್ನು ಏಕೆ ಹೊರಗಿಡಲಾಗಿದೆ?
► ಈ ಮೂರು ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರರಿಗೆ ನೆರವಾಗುವುದು ಮಾತ್ರ ಉದ್ದೇಶವಾಗಿದ್ದರೆ 2014,ಡಿ.31ರ ಕಟ್-ಆಫ್ ದಿನಾಂಕವೇಕೆ? ಆ ದಿನಾಂಕದ ನಂತರ ಭಾರತಕ್ಕೆ ಪರಾರಿಯಾಗಲು ಉತ್ತಮ ಕಾರಣಗಳನ್ನು ಹೊಂದಿರುವ ಅಥವಾ ಕಿರುಕುಳದಿಂದ ತಪ್ಪಿಸಿಕೊಳ್ಳಲು ಈಗಲೂ ಇಲ್ಲಿಗೆ ಪಲಾಯನ ಮಾಡುವ ಸಂತ್ರಸ್ತರನ್ನು ಸರಕಾರವು ಹೇಗೆ ನಡೆಸಿಕೊಳ್ಳಲು ಉದ್ದೇಶಿಸಿದೆ?
ಈ ಯಾವುದೇ ಪ್ರಶ್ನೆಗಳಿಗೆ ಮೋದಿ ಸರಕಾರದ ಬಳಿ ಉತ್ತರವಿಲ್ಲ. ಸಿಎಎ ಅನ್ನು ಜಾರಿಗೊಳಿಸಲು ಮತ್ತು ಈ ನಿರಾಶ್ರಿತರನ್ನು ಉದಾರವಾಗಿ ನಡೆಸಿಕೊಳ್ಳಲು ನಾಲ್ಕೂವರೆ ವರ್ಷಗಳು ಏಕೆ ಬೇಕಾದವು ಎನ್ನುವುದನ್ನೂ ವಿವರಿಸಲು ಅದಕ್ಕೆ ಸಾಧ್ಯವಿಲ್ಲ.
ಪ್ರಶ್ನೆ : ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರ ಮೇಲೆ ಕಾಯ್ದೆಯ ಪರಿಣಾಮಗಳೇನು?
ಗೃಹ ಸಚಿವಾಲಯದ ಉತ್ತರ : ಸಿಎಎ ಭಾರತೀಯ ಮುಸ್ಲಿಮರ ಮೇಲೆ ಪರಿಣಾಮವನ್ನು ಬೀರುವ ಯಾವುದೇ ನಿಬಂಧನೆಯನ್ನು ಒಳಗೊಂಡಿಲ್ಲ ಮತ್ತು ದೇಶದಲ್ಲಿಯ 18 ಕೋಟಿ ಮುಸ್ಲಿಮರಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ,ಹೀಗಾಗಿ ಅವರು ಚಿಂತಿಸಬೇಕಿಲ್ಲ. ಈ ಕಾಯ್ದೆಯ ಬಳಿಕ ಯಾವುದೇ ಭಾರತೀಯ ಪ್ರಜೆಗೆ ಆತನ ಪೌರತ್ವವನ್ನು ಸಾಬೀತುಗೊಳಿಸಲು ಯಾವುದೇ ದಾಖಲೆಯನ್ನು ಒದಗಿಸುವಂತೆ ಕೇಳಲಾಗುವುದಿಲ್ಲ.
ವಾಸ್ತವ : ನಿರಾಶ್ರಿತರು ಮತ್ತು ನುಸುಳುಕೋರರಿಗೆ ಸಂಬಂಧಿಸಿದಂತೆ ಮೋದಿ ಸರಕಾರದ ನೀತಿಗಳ ವಿಷಯಕ್ಕೆ ಬಂದಾಗ ‘ಕ್ರೊನೋಲಜಿ (ಕಾಲಾನುಕ್ರಮಣಿಕೆ)’ಯು ಕೆಲಸ ಮಾಡುತ್ತದೆ ಎಂದು ಗೃಹಸಚಿವ ಅಮಿತ್ ಶಾ ಈ ಹಿಂದೆ ಹಲವಾರು ಬಾರಿ ಹೇಳಿದ್ದರು. ‘ಮೊದಲು ನಾವು ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ)ಯನ್ನು ತರುತ್ತೇವೆ,ಪ್ರತಿಯೊಬ್ಬ ನಿರಾಶ್ರಿತರಿಗೂ ಪೌರತ್ವ ದೊರೆಯುತ್ತದೆ,ಬಳಿಕ ನಾವು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ)ಯನ್ನು ತರುತ್ತೇವೆ. ಹೀಗಾಗಿ ನಿರಾಶ್ರಿತರು ಚಿಂತಿಸಲು ಕಾರಣವಿಲ್ಲ,ಆದರೆ ನುಸುಳುಕೋರರು ಚಿಂತಿಸಲು ಖಂಡಿತವಾಗಿಯೂ ಕಾರಣವನ್ನು ಹೊಂದಿರುತ್ತಾರೆ. ಹೀಗಾಗಿ ಕಾಲಾನುಕ್ರಮಣಿಕೆಯನ್ನು ಅರ್ಥ ಮಾಡಿಕೊಳ್ಳಿ ’ ಎಂದು ಶಾ 2019,ಎಪ್ರಿಲ್ನಲ್ಲಿ ಹೇಳಿದ್ದರು. ಎನ್ಆರ್ಸಿ ಬಂಗಾಳಕ್ಕೆ ಮಾತ್ರವಲ್ಲ,ಇಡೀ ದೇಶಕ್ಕೆ ಅನ್ವಯಗೊಳ್ಳಲಿದೆ. ಏಕೆಂದರೆ ನುಸುಳುಕೋರರು ಎಲ್ಲ ಕಡೆಗಳಲ್ಲಿಯೂ ಇದ್ದಾರೆ ಎಂದೂ ತಿಳಿಸಿದ್ದರು. 2019,ಡಿ.10ರಂದು ಸಂಸತ್ತಿನಲ್ಲಿ ಮಾತನಾಡಿದ ಸಂದರ್ಭದಲ್ಲಿ ಶಾ,ಎನ್ಆರ್ಸಿ ಖಂಡಿತವಾಗಿಯೂ ಬರಲಿದೆ ಮತ್ತು ಅದು ಜಾರಿಗೊಂಡಾಗ ಯಾವುದೇ ನುಸುಳುಕೋರರಿಗೆ ತಮ್ಮನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು.
ಶಾ ಅವರ ಮಾತಿನ ಅರ್ಥವೇನು? ಎನ್ಆರ್ಸಿಯು ಭಾರತದಲ್ಲಿನ ಪ್ರತಿ ವ್ಯಕ್ತಿಯ ಪೌರತ್ವ ಸ್ಥಿತಿಗತಿಯನ್ನು ಆತ/ಆಕೆ ಒದಗಿಸುವ ದಾಖಲೆಗಳ ಆಧಾರದಲ್ಲಿ ಪರೀಕ್ಷಿಸುವ ಪ್ರಕ್ರಿಯೆಯಾಗಿದೆ. ಎನ್ಆರ್ಸಿಯನ್ನು ಮೊದಲು ಜಾರಿಗೆ ತಂದ ಅಸ್ಸಾಮಿನಲ್ಲಿ ಫಲಿತಾಂಶಗಳು ವಿನಾಶಕಾರಿಯಾಗಿವೆ. ಸುಮಾರು 19 ಲಕ್ಷ ಜನರನ್ನು ಪೌರತ್ವದಿಂದ ಹೊರಗಿರಿಸಲಾಗಿದೆ. ಇವರು ಅಗತ್ಯ ದಾಖಲೆಗಳನ್ನು ಒದಗಿಸಲು ಅಸಮರ್ಥರಾದ ಭಾರತೀಯ ನಾಗರಿಕರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಹಿಂದುಗಳಾಗಿದ್ದಾರೆ. ಸಿಎಎ ಸೂಕ್ತ ದಾಖಲೆಗಳನ್ನು ಹೊಂದಿರದವರಿಗೆ ಪೌರತ್ವಕ್ಕೆ ಮಾರ್ಗವನ್ನು ಒದಗಿಸುವುದರಿಂದ ಎನ್ಆರ್ಸಿ ಪ್ರಕ್ರಿಯೆಯನ್ನು ಪೂರೈಸಲು ವಿಫಲಗೊಂಡ ಹಿಂದುಗಳು ತಮ್ಮನ್ನು ಹೊರಹಾಕಲಾಗುತ್ತದೆ ಅಥವಾ ಹಕ್ಕು ವಂಚಿತರಾಗುತ್ತೇವೆ ಎಂದು ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡುವುದು ಕಾಯ್ದೆಯ ಹಿಂದಿನ ಉದ್ದೇಶವಾಗಿತ್ತು. ಆದರೆ ಎನ್ಆರ್ಸಿ ಪ್ರಕ್ರಿಯೆಯನ್ನು ಪೂರೈಸಲು ವಿಫಲಗೊಳ್ಳುವ ಮುಸ್ಲಿಮರಿಗೆ ಯಾವುದೇ ಮಾರ್ಗವಿಲ್ಲ,ಅವರು ‘ನುಸುಳುಕೋರರು’ ಎಂದು ಬ್ರ್ಯಾಂಡ್ ಆಗುವ ಅಪಾಯವನ್ನು ಎದುರಿಸುತ್ತಾರೆ.
ಎನ್ಆರ್ಸಿಯನ್ನು ಜಾರಿಗೊಳಿಸುವ ತನ್ನ ಯೋಜನೆಯನ್ನು ಮೋದಿ ಸರಕಾರವು ಔಪಚಾರಿಕವಾಗಿ ಬಿಟ್ಟಿದ್ದರೂ,ಸಿಎಎ ತಮ್ಮ ಪೌರತ್ವದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎಂದು ಭಾರತೀಯ ಮುಸ್ಲಿಮರು ಚಿಂತಿಸಬೇಕಿಲ್ಲ ಎಂಬ ಗ್ರಹ ಸಚಿವಾಲಯದ ಹೇಳಿಕೆಗಳು ನಿಜವಲ್ಲ.
ಪ್ರಶ್ನೆ:ಬಾಂಗ್ಲಾದೇಶ,ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಅಕ್ರಮ ಮುಸ್ಲಿಮ್ ವಲಸಿಗರನ್ನು ವಾಪಸ್ ಕಳುಹಿಸಲು ಯಾವುದೇ ಅವಕಾಶ ಅಥವಾ ಒಪ್ಪಂದವಿದೆಯೇ?
ಗ್ರಹ ಸಚಿವಾಲಯ ಉತ್ತರ : ಅಂತಹ ಯಾವುದೇ ಒಪ್ಪಂದವನ್ನು ಭಾರತವು ಹೊಂದಿಲ್ಲ. ಈ ಪೌರತ್ವ ಕಾಯ್ದೆಯು ಅಕ್ರಮ ವಲಸಿಗರ ಗಡಿಪಾರಿನೊಂದಿಗೆ ವ್ಯವಹರಿಸುವುದಿಲ್ಲ,ಆದ್ದರಿಂದ ಸಿಎಎ ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬ ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಂದು ವರ್ಗದ ಜನರ ಕಳವಳವು ಅಸಮರ್ಥನೀಯವಾಗಿದೆ.
ವಾಸ್ತವ : ಇದು ಬುದ್ಧಿವಂತ ಮತ್ತು ವಂಚಿಸುವ ಸುಳ್ಳು. ವಿದೇಶಿಯರ ಕಾಯ್ದೆ ಮತ್ತು ಪಾಸ್ಪೋರ್ಟ್ ಕಾಯ್ದೆ ಅಕ್ರಮವಾಗಿ ದೇಶದಲ್ಲಿ ಉಳಿದುಕೊಂಡಿದ್ದಾರೆ ಎಂದು ಸರಕಾರವು ಪರಿಗಣಿಸಿರುವವರನ್ನು ಗಡಿಪಾರು ಮಾಡಲು ಅದಕ್ಕೆ ಈಗಾಗಲೇ ಅಧಿಕಾರವನ್ನು ನೀಡಿವೆ. ವಾಪಸಾತಿಗೆ ಒಪ್ಪಂದದ ಅನುಪಸ್ಥಿತಿಯು ಅಕ್ರಮ ವಲಸಿಗರು ಎಂದು ಪರಿಗಣಿಸಲಾದ ವ್ಯಕ್ತಿಗಳು ದೀರ್ಘಾವಧಿಗೆ ಜೈಲಿನಲ್ಲಿ ಅಥವಾ ಬಂಧನ ಕೇಂದ್ರದಲ್ಲಿ ಕೊಳೆಯಬೇಕಾಗುತ್ತದೆ ಎಂಬ ಅರ್ಥವನ್ನು ಮಾತ್ರ ನೀಡುತ್ತದೆ. ಎನ್ಆರ್ಸಿಯ ಜೊತೆ ಒಟ್ಟಾಗಿ ತೆಗೆದುಕೊಂಡರೆ ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಂದು ವರ್ಗವು ಸಿಎಎ ಒಳಗೊಂಡಿರುವ ಪ್ರಕ್ರಿಯೆಯನ್ನು ಮುಸ್ಲಿಮ್ ವಿರೋಧಿಯನ್ನಾಗಿ ಏಕೆ ನೋಡುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಇದು ಬಂಧನ ಅಥವಾ ಗಡಿಪಾರಿಗೆ ಕಾರಣವಾಗದಿದ್ದರೂ ಸಹ ಹೆಚ್ಚಿನವರು ಮುಸ್ಲಿಮರೇ ಆಗಲಿರುವ ಭಾರೀ ಸಂಖ್ಯೆಯ ಭಾರತೀಯರು ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ಭೀತಿಯಾಗಿದೆ.
ಪ್ರಶ್ನೆ : ಅಕ್ರಮ ವಲಸಿಗ ಯಾರು?
ಗ್ರಹ ಸಚಿವಾಲಯ ಉತ್ತರ : 1955ರ ಪೌರತ್ವ ಕಾಯ್ದೆಯಂತೆ ಈ ಸಿಎಎ ಅಕ್ರಮ ವಲಸಿಗನನ್ನು ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ ವ್ಯಕ್ತಿ ಎಂದು ವ್ಯಾಖ್ಯಾನಿಸುತ್ತದೆ.
ವಾಸ್ತವ : 2003ರಲ್ಲಿ ಆಗಿನ ವಾಜಪೇಯಿ ಸರಕಾರವು ಅಕ್ರಮ ವಲಸಿಗರು ನ್ಯಾಚುರಲೈಜೇಷನ್ (ದೇಶಿಕರಣ) ಅಥವಾ ವಿವಾಹದ ಮೂಲಕ ಭಾರತೀಯ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿಷೇಧಿಸಲು ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತಂದಿತ್ತು. 2016ರಲ್ಲಿ ಮೋದಿ ಸರಕಾರವು 2014,ಡಿ.31ಕ್ಕೆ ಮುನ್ನ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ,ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಈ ನಿಬಂಧನೆಯಿಂದ ವಿನಾಯಿತಿ ನೀಡಲು ಕಾಯ್ದೆಗೆ ತಿದ್ದುಪಡಿಯನ್ನು ತಂದಿತ್ತು. 2019ರ ಸಿಎಎ ಅವರಿಗೆ ತ್ವರಿತ ಪೌರತ್ವಕ್ಕೆ ಅವಕಾಶ ನೀಡುವ ಮೂಲಕ ಈ ಪ್ರಕ್ರಿಯೆಯನ್ನು ಇನ್ನಷ್ಟು ಮುಂದಕ್ಕೊಯ್ದಿದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ ಇಂದಿನ ಕಾನೂನಿನಂತೆ 2014,ಡಿ.31ಕ್ಕೆ ಮುನ್ನ ಮಾನ್ಯ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿರುವ ಈ ಮೂರು ದೇಶಗಳ ಪ್ರಜೆಗಳನ್ನು ಅವರು ಮುಸ್ಲಿಮರಾಗಿದ್ದರೆ ಮಾತ್ರ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಎಲ್ಲ ಮುಸ್ಲಿಮೇತರರನ್ನು ಇನ್ನು ಮುಂದೆ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ. ಧರ್ಮದ ಆಧಾರದಲ್ಲಿ ಈ ತಾರತಮ್ಯವು ಭಾರತೀಯ ಸಂವಿಧಾನವನ್ನು ಉಲ್ಲಂಘಿಸುತ್ತದೆ. ಇದು ಅಂತರರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದದಡಿ ಭಾರತದ ಬದ್ಧತೆಗಳ ಉಲ್ಲಂಘನೆಯೂ ಆಗುತ್ತದೆ.
ಪ್ರಶ್ನೆ:ಇಸ್ಲಾಮ್ ಧರ್ಮದ ಮೇಲೆ ಈ ಕಾಯ್ದೆಯ ಪರಿಣಾಮವೇನು?
ಗ್ರಹ ಸಚಿವಾಲಯದ ಉತ್ತರ : ಆ ಮೂರು ಮುಸ್ಲಿಮ್ ದೇಶಗಳಲ್ಲಿಯ ಅಲ್ಪಸಂಖ್ಯಾತರಿಗೆ ಕಿರುಕುಳದಿಂದಾಗಿ ವಿಶ್ವಾದ್ಯಂತ ಇಸ್ಲಾಮ್ ಧರ್ಮದ ಹೆಸರಿಗೆ ಕಳಂಕ ತಟ್ಟಿದೆ. ಆದಾಗ್ಯೂ ಶಾಂತಿಪ್ರಿಯ ಧರ್ಮವಾಗಿರುವ ಇಸ್ಲಾಮ್ ದ್ವೇಷ/ಹಿಂಸೆ/ಧಾರ್ಮಿಕ ಕಾರಣದಿಂದ ಕಿರುಕುಳವನ್ನು ಎಂದಿಗೂ ಬೋಧಿಸುವುದಿಲ್ಲ ಅಥವಾ ಸೂಚಿಸುವುದಿಲ್ಲ. ಕಿರುಕುಳಕ್ಕೆ ಅನುಕಂಪ ಅಥವಾ ಪರಿಹಾರವನ್ನು ತೋರಿಸುವ ಈ ಕ್ರಮವು ಕಿರುಕುಳದ ಹೆಸರಿನಲ್ಲಿ ಕಳಂಕಿತಗೊಳ್ಳುವುದರಿಂದ ಇಸ್ಲಾಮ್ ಧರ್ಮವನ್ನು ರಕ್ಷಿಸುತ್ತದೆ.
ವಾಸ್ತವ : ಈ ಉತ್ತರದ ಅತ್ಯಂತ ಕೆಟ್ಟ ಬರಹವನ್ನು ನಾವು ಕಡೆಗಣಿಸಿದರೂ ಕೇವಲ ಮುಸ್ಲಿಮ್ ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿರುವ ಜನರನ್ನು ಮಾತ್ರ ಸ್ವೀಕರಿಸಲು ಏಕೆ ಕಾಯ್ದೆಯನ್ನು ಮಾಡಲಾಗಿದೆ ಮತ್ತು ಮ್ಯಾನ್ಮಾರ್,ಚೀನಾ ಮತ್ತು ಶ್ರೀಲಂಕಾದಂತಹ ನೆರೆಯ ಮುಸ್ಲಿಮೇತರ ದೇಶಗಳ ಜನರಿಗೆ ಏಕೆ ಅವಕಾಶ ನೀಡಲಾಗಿಲ್ಲ ಎನ್ನುವುದನ್ನು ವಿವರಿಸಲು ಗ್ರಹ ಸಚಿವಾಲಯ ಮತ್ತು ಮೋದಿ ಸರಕಾರಕ್ಕೆ ಸಾಧ್ಯವಾಗಿಲ್ಲ. ಮುಸ್ಲಿಮ್ ದೇಶಗಳಲ್ಲಿ ಕಿರುಕುಳಕ್ಕೆ ಏನೋ ವಿಶಿಷ್ಟತೆಯಿದೆ ಮತ್ತು ಅದು ಸಂತ್ರಸ್ತರಿಗಾಗಿ ಹೊಸ ಕಾನೂನು ಸೃಷ್ಟಿಸಲು ಕಾರಣವಾಗಿದೆ ಎಂದು ಸರಕಾರವು ಹೇಳುತ್ತಿಲ್ಲವೇ? ಇದು ಇತರ ಧರ್ಮಗಳಿಗೆ ಹೋಲಿಸಿದರೆ ಇಸ್ಲಾಮ್ ಮತ್ತು ಮುಸ್ಲಿಮರನ್ನು ಸರಕಾರವು ಹೇಗೆ ನೋಡುತ್ತದೆ ಎಂಬ ಬಗ್ಗೆ ನಮಗೇನು ಹೇಳುತ್ತದೆ?
ಸಿಎಎ ಇಸ್ಲಾಮಿನ ವರ್ಚಸ್ಸಿನ ಮೇಲೆ ಯಾವುದೇ ಪರಿಣಾಮವನ್ನು ಬೀರಬಹುದು ಅಥವಾ ಬೀರದಿರಬಹುದು,ಆದರೆ ಅದು ಈಗಾಗಲೇ ದೇಶದ ವರ್ಚಸ್ಸಿನ ಮೀಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ.
ಪ್ರಶ್ನೆ:ಭಾರತೀಯ ಪೌರತ್ವವನ್ನು ಪಡೆಯಲು ಮುಸ್ಲಿಮರಿಗೆ ಯಾವುದಾದರೂ ನಿರ್ಬಂಧವಿದೆಯೇ?
ಗ್ರಹ ಸಚಿವಾಲಯದ ಉತ್ತರ : ಇಲ್ಲ,ಪೌರತ್ವ ಕಾಯ್ದೆಯ ಕಲಂ 6ರಡಿ ವಿಶ್ವದ ಯಾವುದೇ ಭಾಗದ ಮುಸ್ಲಿಮರು ಭಾರತೀಯ ಪೌರತ್ವವನ್ನು ಪಡೆಯಲು ಯಾವುದೇ ನಿರ್ಬಂಧವಿಲ್ಲ.
ವಾಸ್ತವ : 2003ರಿಂದ ಪೌರತ್ವ ಕಾಯ್ದೆಯು ಅಕ್ರಮ ವಲಸಿಗರು ಭಾರತದ ಪೌರತ್ವ ಪಡೆಯುವುದನ್ನು ನಿಷೇಧಿಸಿದೆ. ಸಿಎಎ ಪಾಕಿಸ್ತಾನ,ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಮುಸ್ಲಿಮೇತರ ಅಕ್ರಮ ವಲಸಿಗರು ಮತ್ತು ಭಾರತದಲ್ಲಿ ಜನಿಸಿದ ಅವರ ಮಕ್ಕಳು ಭಾರತೀಯ ಪೌರತ್ವವನ್ನು ಪಡೆಯಲು ಮುಕ್ತ ಅವಕಾಶವನ್ನು ನೀಡಿದೆ. ಆದರೆ ಮುಸ್ಲಿಮ್ ಅಕ್ರಮ ವಲಸಿಗರು ಮತ್ತು ಭಾರತದಲ್ಲಿ ಜನಿಸಿದ ಅವರ ಮಕ್ಕಳು ಭಾರತೀಯ ಪೌರತವವನ್ನು ಪಡೆಯಲು ನಿಷೇಧ ಮುಂದುವರಿಯಲಿದೆ.
ಪ್ರಶ್ನೆ:ಇತರ ಯಾವುದೇ ದೇಶದ ಮುಸ್ಲಿಮ್ ವಲಸಿಗರಿಗೆ ಯಾವುದೇ ನಿರ್ಬಂಧವಿದೆಯೇ?
ಗ್ರಹ ಸಚಿವಾಲಯದ ಉತ್ತರ : ಸಿಎಎ ದೇಶಿಕರಣ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ. ಆದ್ದರಿಂದ ಭಾರತೀಯ ಪೌರತ್ವವನ್ನು ಬಯಸುವ ಯಾವುದೇ ವಿದೇಶದ ಮುಸ್ಲಿಮ್ ವಲಸಿಗರು ಸೇರಿದಂತೆ ಯಾರು ಬೇಕಾದರೂ ಪ್ರಸ್ತುತ ಕಾನೂನುಗಳಡಿ ಅದಕ್ಕಾಗಿ ಅರ್ಜಿ ಸಲ್ಲಿಸಬಹುದು. ಆ ಮೂರು ಇಸ್ಲಾಮಿಕ್ ದೇಶಗಳಲ್ಲಿ ತಮ್ಮ ಪದ್ಧತಿಯಲ್ಲಿ ಇಸ್ಲಾಮ್ ಆಚರಿಸುತ್ತಿದ್ದಕ್ಕಾಗಿ ಕಿರುಕುಳಕ್ಕೊಳಗಾದ ಯಾವುದೇ ಮುಸ್ಲಿಂ ವ್ಯಕ್ತಿಯು ಪ್ರಸ್ತುತ ಕಾನೂನುಗಳಡಿ ಭಾರತೀಯ ಪೌರತ್ವವನ್ನು ಕೋರಿ ಅರ್ಜಿ ಸಲ್ಲಿಸಲು ಈ ಕಾಯ್ದೆಯು ತಡೆಯನ್ನೊಡ್ಡುವುದಿಲ್ಲ.
ವಾಸ್ತವ : ಈ ಉತ್ತರದಲ್ಲಿ ಗ್ರಹ ಸಚಿವಾಲಯ ತನ್ನ ಗುಟ್ಟನ್ನು ತಾನೇ ಹೊರಬಿಟ್ಟಿದೆ. ತಮ್ಮ ಪದ್ಧತಿಯಲ್ಲಿ ಇಸ್ಲಾಮ್ ಆಚರಿಸಿದ್ದಕ್ಕಾಗಿ ಕಿರುಕುಳಕ್ಕೊಳಗಾಗಿರುವ ಮುಸ್ಲಿಮರು ಪಾಕಿಸ್ತಾನ,ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಇದ್ದಾರೆ ಎನ್ನುವುದು ಅದಕ್ಕೆ ಚೆನ್ನಾಗಿ ತಿಳಿದಿದೆ. ಆದೆ ಅವರು ಮಾನ್ಯ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದರೆ ಅಥವಾ ವೀಸಾ ಅವಧಿಯನ್ನು ಮೀರಿ ಇಲ್ಲಿ ಉಳಿದುಕೊಂಡರೆ ಅವರು ಅಕ್ರಮ ವಲಸಿಗರು ಎಂದು ಸ್ವಯಂಚಾಲಿತವಾಗಿ ವರ್ಗೀಕರಿಸಲ್ಪಡುತ್ತಾರೆ ಮತ್ತು ಪ್ರಸ್ತುತ ಕಾನೂನುಗಳಡಿ ಭಾರತೀಯ ಪೌರತ್ವಕ್ಕೆ ಅರ್ಹರಾಗುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಅವರು ಪ್ರಸ್ತುತ ಕಾನೂನುಗಳಡಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.