ಯುಪಿಎ ತಂದ ಚುನಾವಣಾ ಟ್ರಸ್ಟ್ ಯೋಜನೆಯ ಅತ್ಯಂತ ದೊಡ್ಡ ಫಲಾನುಭವಿ ಬಿಜೆಪಿಯಾಗಿದ್ದು ಹೇಗೆ?

Update: 2024-02-24 12:53 GMT

ಸಾಂದರ್ಭಿಕ ಚಿತ್ರ (Photo: PTI)

ಭಾಗ 3

́ದಿ ನ್ಯೂಸ್ ಮಿನಿಟ್ʼ ಹಾಗು ʼನ್ಯೂಸ್ ಲಾಂಡ್ರಿʼ ಜಂಟಿಯಾಗಿ ಮಾಡಿರುವ ತನಿಖಾ ವರದಿಯ ಮೂರನೆಯ ಭಾಗ ಇಲ್ಲಿದೆ. ರಾಗಮಾಲಿಕಾ ಕಾರ್ತಿಕೇಯನ್ ಅವರು ಈ ವರದಿ ಮಾಡಿದ್ದಾರೆ.

2022-23ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಭಾರತೀಯ ಕಾರ್ಪೊರೇಟ್ ಕ್ಷೇತ್ರದಿಂದ ಬಿಜೆಪಿಯು ಸ್ವೀಕರಿಸಿದ್ದ ಪ್ರತಿ 100 ರೂ. ದೇಣಿಗೆಗೆ ಕಾಂಗ್ರೆಸ್ 19 ಪೈಸೆಗಳನ್ನು ಸ್ವೀಕರಿಸಿತ್ತು. ವಾಸ್ತವದಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ 2013 ಮತ್ತು 2023ರ ನಡುವೆ ಕಾಂಗ್ರೆಸ್ ಸ್ವೀಕರಿಸಿದ್ದ ಒಟ್ಟು ಮೊತ್ತಕ್ಕಿಂತ ಅಧಿಕ ಹಣವನ್ನು ಬಿಜೆಪಿ 2022-23ರ ಒಂದೇ ವರ್ಷದಲ್ಲಿ ಗಳಿಸಿತ್ತು!

ಈ ಟ್ರಸ್ಟ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ಪ್ರತಿಯೊಂದು ರಾಜಕೀಯ ಪಕ್ಷವು ಸ್ವೀಕರಿಸುವ ಮೊತ್ತವನ್ನು ಹೇಗೆ ನಿರ್ಧರಿಸುತ್ತವೆ ಎನ್ನುವುದರ ಕುರಿತು ಯಾವುದೇ ಸ್ಪಷ್ಟತೆಯಿಲ್ಲ. 2024ರ ಸಾರ್ವತ್ರಿಕ ಚುನಾವಣೆಯ ಕಣದಲ್ಲಿರುವ ಎರಡು ಅತ್ಯಂತ ದೊಡ್ಡ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳಲ್ಲಿಯ ಬೃಹತ್ ವ್ಯತ್ಯಾಸವು ಸಮಾನ ಸ್ಪರ್ಧೆಗೆ ಅವಕಾಶ ಸಾಧ್ಯವೇ ಮತ್ತು ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಹೇಗೆ ನಿರ್ವಹಿಸುತ್ತವೆ ಎನ್ನುವುದನ್ನು ಬೃಹತ್ ಕಾರ್ಪೊರೇಟ್‌ಗಳು ನಿರ್ದೇಶಿಸುತ್ತವೆಯೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ವಾಸ್ತವದಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಬಿಜೆಪಿ ಪಡೆದಿರುವ ಹಣದ ಬಹು ಪಾಲು ಭಾರ್ತಿ ಗ್ರೂಪ್ ಸ್ಥಾಪಿಸಿದ ಪ್ರುಡಂಟ್ ಎಲೆಕ್ಟ್ರೋರಲ್ ಟ್ರಸ್ಟ್‌ವೊಂದರಿಂದಲೇ ಬಂದಿದೆ.

2013ರಲ್ಲಿ ಯುಪಿಎ ಸರಕಾರವು ಚುನಾವಣಾ ಟ್ರಸ್ಟ್ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಡಿ ಕಂಪನಿಯೊಂದು ಚುನಾವಣಾ ಟ್ರಸ್ಟ್‌ ಅನ್ನು ಸ್ಥಾಪಿಸಬಹುದು ಹಾಗೂ ಕಾರ್ಪೊರೇಟ್‌ಗಳು ಮತ್ತು ವ್ಯಕ್ತಿಗಳಿಂದ ದೇಣಿಗೆಗಳನ್ನು ಸ್ವೀಕರಿಸಬಹುದು. ಹೀಗೆ ಸಂಗ್ರಹಿಸಲಾದ ಹಣವನ್ನು ವರ್ಷಾಂತ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಹಂಚಲಾಗುತ್ತದೆ. ತನಗೆ ದೇಣಿಗೆ ನೀಡಿದವರ ಮತ್ತು ಅವರು ನೀಡಿರುವ ದೇಣಿಗೆಗಳ ವಿವರಗಳನ್ನು ಚುನಾವಣಾ ಟ್ರಸ್ಟ್ ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಇದರಿಂದಾಗಿ ಈ ಯೋಜನೆಯ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪನಿಗಳ ಹೆಸರುಗಳು ಬಹಿರಂಗಗೊಳ್ಳುತ್ತವೆ ಹಾಗೂ ಯಾವುದೇ ಕಂಪನಿ ಮತ್ತು ಯಾವುದೇ ಪಕ್ಷದ ನಡುವೆ ಪರಸ್ಪರ ಸಂಬಂಧವಿರುವುದಿಲ್ಲ-ಕನಿಷ್ಠ ಇದು ಸಿದ್ಧಾಂತವಾಗಿದೆ.

ಇಂತಹ ಮಾದರಿಯನ್ನು ಮೊದಲ ಬಾರಿಗೆ 1996ರಲ್ಲಿ ಟಾಟಾ ಗ್ರೂಪ್ ಬಳಸಿತ್ತು. ತೀರ ಇತ್ತೀಚಿನ ಚುನಾವಣೆಗಳಲ್ಲಿ ಪ್ರತಿ ಪಕ್ಷವು ಗಳಿಸಿದ ಸ್ಥಾನಗಳು ಮತ್ತು ಮತಗಳ ಆಧಾರದಲ್ಲಿ ವಿವಿಧ ಪಕ್ಷಗಳಿಗೆ ಹಣವನ್ನು ಹಂಚಲು ಅದು ಸೂತ್ರವೊಂದನ್ನು ಹೊಂದಿತ್ತು. ಚುನಾವಣಾ ಟ್ರಸ್ಟ್‌ಗಳು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಜನಪ್ರಿಯವಾಗಿದ್ದವು, ಏಕೆಂದರೆ ಅವು ಅನಾಮಧೇಯತೆಯನ್ನು ಒದಸುತ್ತಿದ್ದವು. ಹಣವು ವಿವಿಧ ರಾಜಕೀಯ ಪಕ್ಷಗಳಿಗೆ ಹಂಚಿಕೆಯಾಗುವುದರಿಂದ ತಾವು ಪಕ್ಷಾತೀತವಾಗಿದ್ದೇವೆ ಎಂದು ಕಂಪನಿಗಳು ಹೇಳಿಕೊಳ್ಳಬಹುದು. ತಾವು ಬಹಿರಂಗವಾಗಿ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ದೇಣಿಗೆಯನ್ನು ನೀಡಿದರೆ ‘ದಂಡನೆ’ಗೆ ಗುರಿಯಾಗಬಹುದು ಮತ್ತು ತಾವು ಬೆಂಬಲಿಸದಿರದ ಪಕ್ಷವು ಅಧಿಕಾರಕ್ಕೆ ಬರಬಹುದು ಎಂದು ಕಂಪನಿಗಳು ಹೆದರುತ್ತಿದ್ದವು.

ಕಾರ್ಪೊರೇಟ್ ದೇಣಿಗೆಗಳು ಮತ್ತು ಚುನಾವಣಾ ಗೆಲುವುಗಳು

ಯುಪಿಎ ಸರಕಾರವು 2013ರಲ್ಲಿ ಚುನಾವಣಾ ಟ್ರಸ್ಟ್ ಯೋಜನೆಯನ್ನು ಜಾರಿಗೆ ತಂದಾಗಿನಿಂದ ಬಿಜೆಪಿಯು ಅತ್ಯಂತ ಹೆಚ್ಚಿನ ಲಾಭವನ್ನು ಪಡೆದಿದೆ ಮತ್ತು ಚುನಾವಣಾ ಟ್ರಸ್ಟ್‌ಗಳಿಗೆ ದೇಣಿಗೆಗಳನ್ನು ನೀಡಿದ್ದ ಹೆಚ್ಚಿನ ಕಂಪನಿಗಳು ವಾಸ್ತವದಲ್ಲಿ ಇತರ ಯಾವುದೇ ಪಕ್ಷಕ್ಕಿಂತ ಬಿಜೆಪಿಯನ್ನು ಹೆಚ್ಚು ಬೆಂಬಲಿಸಿದ್ದವು ಎನ್ನುವುದು ಸ್ಪಷ್ಟವಾಗಿದೆ. ಬಿಜೆಪಿ ಕಳೆದ 10 ವರ್ಷಗಳಲ್ಲಿ ವಿವಿಧ ಚುನಾವಣಾ ಟ್ರಸ್ಟ್‌ಗಳ ಮೂಲಕ 1,893 ಕೋಟಿ ರೂ.ಗಳನ್ನು ಸ್ವೀಕರಿಸಿದ್ದರೆ ಇದರ ಕೇವಲ ಶೇ.11.7ರಷ್ಟು ಪಾಲು (221 ಕೋಟಿ ರೂ.) ಕಾಂಗ್ರೆಸ್‌ಗೆ ದಕ್ಕಿದೆ. ಇದು ಬಿಜೆಪಿಯು 2022-23ರ ಒಂದೇ ವರ್ಷದಲ್ಲಿ ಗಳಿಸಿದ 257 ಕೋಟಿ ರೂ.ಗಿಂತ ಕಡಿಮೆಯಾಗಿದೆ.

2014-15ರಲ್ಲಿ, ಸಾರ್ವತ್ರಿಕ ಚುನಾವಣೆಗಳ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ರಚಿಸಿದಾಗ ಚುನಾವಣಾ ಟ್ರಸ್ಟ್‌ಗಳ ಮೂಲಕ ಬಿಜೆಪಿಯು 110 ಕೋಟಿ ರೂ.ಗಳನ್ನು ಸ್ವೀಕರಿಸಿದ್ದರೆ ಕಾಂಗ್ರೆಸ್ 28 ಕೋಟಿ ರೂ.ಗೂ ಕಡಿಮೆ ಹಣವನ್ನು ಪಡೆದಿತ್ತು. ಎನ್‌ಸಿಪಿ 6.8 ಕೋಟಿ ರೂ.,ಬಿಜೆಡಿ 5.5 ಕೋಟಿ ರೂ.,ಆಪ್ 3 ಕೋಟಿ ರೂ.,ಶಿವಸೇನೆ 2.3 ಕೋಟಿ ರೂ. ಮತ್ತು ಟಿಎಂಸಿ 1.5 ಕೋಟಿ ರೂ.ಗಳನ್ನು ಸ್ವೀಕರಿಸಿದ್ದವು. ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ (40 ಕೋಟಿ ರೂ.),ಭಾರ್ತಿ ಗ್ರೂಪ್ (31 ಕೋಟಿ ರೂ.), ಟಾಟಾ ಗ್ರೂಪ್ (25 ಕೋಟಿ ರೂ.) ಮತ್ತು ಡಿಎಲ್‌ಎಫ್ (25 ಕೋಟಿ ರೂ.) ಇವು 2014-15ರಲ್ಲಿ ಚುನಾವಣಾ ಟ್ರಸ್ಟ್‌ಗಳಿಗೆ ಅತ್ಯಂತ ಹೆಚ್ಚು ದೇಣಿಗೆಗಳನ್ನು ನೀಡಿದ್ದವು.

2016-17ರಲ್ಲಿ ಚುನಾವಣಾ ಟ್ರಸ್ಟ್‌ಗಳಿಂದ ಬಿಜೆಪಿ 281 ಕೋಟಿ ರೂ.,ಕಾಂಗ್ರೆಸ್ 9.4 ಕೋಟಿ ರೂ. ಮತ್ತು ಟಿಎಂಸಿ 50 ಲಕ್ಷ ರೂ.ಗಳನ್ನು ಪಡೆದಿದ್ದವು. 2016ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆದು ಟಿಎಂಸಿ ಗೆಲುವು ಸಾಧಿಸಿತ್ತು. 2011ರ ಚುನಾವಣೆಗಳಲ್ಲಿ ಸುಮಾರು ಶೇ.4ರಷ್ಟು ಮತಗಳನ್ನು ಗಳಿಸಿದ್ದ ಬಿಜೆಪಿ 2016ರಲ್ಲಿ ತನ್ನ ಮತಗಳಿಕೆಯನ್ನು ಶೇ.10ಕ್ಕೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. 2017ರಲ್ಲಿ ವಿತ್ತವರ್ಷ ಅಂತ್ಯಗೊಳ್ಳುವ ಮಾರ್ಚ್‌ವರೆಗೆ ಪಂಜಾಬ್,‌ ಗೋವಾ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಣಿಪುರಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದವು. ಈ ಪೈಕಿ ನಾಲ್ಕು ರಾಜ್ಯಗಳಲ್ಲ ಬಿಜೆಪಿ ಸ್ವಂತ ಬಲದಲ್ಲಿ ಅಥವಾ ಇತರ ಪಕ್ಷಗಳೊಂದಿಗೆ ಮೈತ್ರಿಗಳೊಂದಿಗೆ ಸರಕಾರವನ್ನು ರಚಿಸಿತ್ತು. ಆ ವರ್ಷ ಡಿಎಲ್‌ಎಫ್ ಗ್ರೂಪ್ (45 ಕೋಟಿ ರೂ.),ಜೆಎಸ್‌ಡಬ್ಲ್ಯು ಎನರ್ಜಿ ಲಿ.(25 ಕೋಟಿ ರೂ.),ಭಾರ್ತಿ ಗ್ರೂಪ್ (22 ಕೋಟಿ ರೂ.) ಮತ್ತು ಪಿರಾಮಲ್ ಎಂಟರ್‌ಪ್ರೈಸಸ್ ಲಿ.(21 ಕೋಟಿ ರೂ.) ಅತ್ಯಂತ ಹೆಚ್ಚಿನ ದೇಣಿಗೆಗಳನ್ನು ನೀಡಿದ್ದ ಕಂಪನಿಗಳಾಗಿದ್ದವು.

2017-18ರಲ್ಲಿ ಬಿಜೆಪಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಸುಮಾರು 170 ಕೋಟಿ ರೂ.ಗಳನ್ನು ಸ್ವೀಕರಿಸಿತ್ತು. ಈ ಅವಧಿಯಲ್ಲಿ ಹಿಮಾಚಲ ಪ್ರದೇಶ, ಗುಜರಾತ್,‌ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಎಲ್ಲ ಐದೂ ರಾಜ್ಯಗಳಲ್ಲಿ ಬಿಜೆಪಿ ತನ್ನ ಸ್ವಂತ ಬಲದಲ್ಲಿ ಅಥವಾ ಇತರ ಪಕ್ಷಗಳೊಂದಿಗೆ ಮೈತ್ರಿಯೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆ ವರ್ಷ ಕಾಂಗ್ರೆಸ್ ಚುನಾವಣಾ ಟ್ರಸ್ಟ್‌ಗಳ ಮೂಲಕ 10 ಕೋಟಿ ರೂ.ಗಳನ್ನು ಪಡೆದಿತ್ತು. ಡಿಎಲ್‌ಎಫ್ (52 ಕೋಟಿ ರೂ.),ಭಾರ್ತಿ ಗ್ರೂಪ್ (33 ಕೋಟಿ ರೂ.) ಮತ್ತು ಟೊರೆಂಟ್ ಗ್ರೂಪ್ (20 ಕೋಟಿ ರೂ.) ಆ ವರ್ಷ ಅತ್ಯಂತ ಹೆಚ್ಚಿನ ದೇಣಿಗೆಗಳನ್ನು ನೀಡಿದ್ದವು.

ಮಾಸ್ಟರ್‌ಸ್ಟ್ರೋಕ್‌

2019ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಹಲವಾರು ಬೆಳವಣಿಗೆಗಳು ಸಂಭವಿಸಿದ್ದವು. 2017ರಲ್ಲಿ ಕೇಂದ್ರ ಸರಕಾರವು ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳ ಮೇಲಿನ ಮಿತಿಯನ್ನು ತೆಗೆದುಹಾಕಿತ್ತು. ಅಲ್ಲಿಯವರೆಗೆ ಕಂಪನಿಗಳು ತಮ್ಮ ಒಟ್ಟು ಲಾಭದ ಶೇ.7.5ಕ್ಕಿಂತ ಹೆಚ್ಚಿನ ದೇಣಿಗೆಗಳನ್ನು ರಾಜಕೀಯ ಪಕ್ಷಗಳಿಗೆ ನೀಡುವಂತಿರಲಿಲ್ಲ. 2018ರಲ್ಲಿ ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗಳನ್ನು ಅನುಮತಿಸುವ ಚುನಾವಣಾ ಬಾಂಡ್ ಯೋಜನೆ ಜಾರಿಗೆ ಬಂದಿತ್ತು. ಈ ಯೋಜನೆಯನ್ನು ಕಾನೂನುಬಾಹಿರ ಎಂದು ಸರ್ವೋಚ್ಚ ನ್ಯಾಯಾಲಯವು ಈಗ ಘೋಷಿಸಿದೆ.

2018-19ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಬಿಜೆಪಿ 110 ಕೋಟಿ ರೂ. ಮತ್ತು ಕಾಂಗ್ರೆಸ್ 43 ಕೋಟಿ ರೂ.ಗಳನ್ನು ಸ್ವೀಕರಿಸಿದ್ದವು. ಇದೇ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ 1,450 ಕೋಟಿ ರೂ.ಗಳನ್ನು ಮತ್ತು ಕಾಂಗ್ರೆಸ್ 383 ಕೋಟಿ ರೂ.ಗಳನ್ನು ಪಡೆದಿದ್ದವು.

ಈ ಅವಧಿಯಲ್ಲಿ ಕರ್ನಾಟಕ, ಛತ್ತೀಸ್‌ಗಡ, ಮಧ್ಯಪ್ರದೇಶ, ಮಿಜೋರಾಮ್, ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದವು. ಈ ಯಾವುದೇ ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸಿರಲಿಲ್ಲ. ಆ ವರ್ಷ ಭಾರ್ತಿ ಗ್ರೂಪ್(39 ಕೋಟಿ ರೂ.) ಮತ್ತು ಡಿಎಲ್‌ಎಫ್ (10 ಕೋಟಿ ರೂ.) ಅತ್ಯಂತ ಹೆಚ್ಚಿನ ದೇಣಿಗೆಗಳನ್ನು ನೀಡಿದ್ದವು.

2019-20ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯು ಚುನಾವಣಾ ಟ್ರಸ್ಟ್‌ಗಳ ಮೂಲಕ ಸುಮಾರು 315 ಕೋಟಿ ರೂ.ಗಳನ್ನು ಸ್ವೀಕರಿಸಿದ್ದು, ಇದು ಇತರ ಎಲ್ಲ ಪಕ್ಷಗಳ ಒಟ್ಟು ಗಳಿಕೆಗಿಂತ ಎರಡು ಪಟ್ಟು ಮತ್ತು 2014ರಲ್ಲಿ ಅದು ಸ್ವೀಕರಿಸಿದ್ದ ಹಣಕ್ಕಿಂತ ಮೂರು ಪಟ್ಟು ಹೆಚ್ಚಾಗಿತ್ತು. ಅದು ಚುನಾವಣಾ ಬಾಂಡ್‌ಗಳ ಮೂಲಕವೂ 2,555 ಕೋಟಿ ರೂ.ಗಳನ್ನು ಸ್ವೀಕರಿಸಿತ್ತು. ಆ ವರ್ಷ ಕಾಂಗ್ರೆಸ್ ಚುನಾವಣಾ ಟ್ರಸ್ಟ್‌ಗಳ ಮೂಲಕ 69 ಕೋಟಿ ರೂ. ಮತ್ತು ಚುನಾವಣಾ ಬಾಂಡ್‌ಗಳ ಮೂಲಕ 317 ಕೋಟಿ ರೂ.ಗಳನ್ನು ಗಳಿಸಿತ್ತು. ಭಾರೀ ಬಹುಮತದೊಂದಿಗೆ ಸಾರ್ವತ್ರಿಕ ಚುನಾವಣೆಯನ್ನು ಗೆದ್ದಿದ್ದ ಬಿಜೆಪಿ ಮತ್ತೊಮ್ಮೆ ಸರಕಾರವನ್ನು ರಚಿಸಿತ್ತು. ಆ ವರ್ಷ ಮೇಘಾ ಇಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಲಿ.(22 ಕೋಟಿ ರೂ.) ಮತ್ತು ಭಾರ್ತಿ ಗ್ರೂಪ್ (10 ಕೋಟಿ ರೂ.) ಅತ್ಯಂತ ಹೆಚ್ಚಿನ ದೇಣಿಗೆಗಳನ್ನು ನೀಡಿದ್ದವು.

ಚುನಾವಣಾ ಟ್ರಸ್ಟ್‌ಗಳು ಹಣವನ್ನು ಹಂಚಿದ್ದು ಹೇಗೆ? 

ಟಾಟಾ ಗ್ರೂಪ್‌ನ ಪ್ರೊಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್ ದೇಶದಲ್ಲಿ ಸ್ಥಾಪನೆಯಾಗಿದ್ದ ಮೊದಲ ಚುನಾವಣಾ ಟ್ರಸ್ಟ್ ಆಗಿತ್ತು. ಚುನಾವಣಾ ಆಯೋಗದ ದತ್ತಾಂಶಗಳಂತೆ ನಂತರದ ವರ್ಷಗಳಲ್ಲಿ 19 ವಿಭಿನ್ನ ಚುನಾವಣಾ ಟ್ರಸ್ಟ್‌ಗಳು ಸ್ಥಾಪನೆಗೊಂಡಿದ್ದವು.

ಆದಾಗ್ಯೂ2020ರಿಂದ ಪ್ರುಡಂಟ್ ಚುನಾವಣಾ ಟ್ರಸ್ಟ್ ಮಾತ್ರ ಗಣನೀಯ ಮೊತ್ತಗಳನ್ನು ಸ್ವೀಕರಿಸುತ್ತಿದೆ. ಅದು ಮೊದಲು ಸತ್ಯ ಚುನಾವಣಾ ಟ್ರಸ್ಟ್ ಎಂದು ಕರೆಯಲ್ಪಡುತ್ತಿತ್ತು ಮತ್ತು ಭಾರ್ತಿ ಗ್ರೂಪ್ 2013ರಲ್ಲಿ ಅದನ್ನು ಆರಂಭಿಸಿತ್ತು. ಮೊದಲ ವರ್ಷವನ್ನು ಹೊರತುಪಡಿಸಿ ಸತ್ಯ/ಪ್ರುಡಂಟ್ ನಿರಂತರವಾಗಿ ಕಾಂಗ್ರೆಸ್‌ಗಿಂತ ಬಿಜೆಪಿಗೆ ಬಹಳ ಹೆಚ್ಚಿನ ಹಣವನ್ನು ನೀಡಿದೆ. 2019-20ರಲ್ಲಿ ಅದು ಬಿಜೆಪಿಗೆ 218 ಕೋ.ರೂ. ಮತ್ತು ಕಾಂಗ್ರೆಸ್‌ಗೆ 31 ಕೋ.ರೂ.ಗಳನ್ನು ನೀಡಿದ್ದರೆ 2020-21ರಲ್ಲಿ ಈ ಮೊತ್ತಗಳು ಅನುಕ್ರಮವಾಗಿ 209 ಕೋ.ರೂ. ಮತ್ತು 2 ಕೋ.ರೂ.ಆಗಿದ್ದವು. 2021-22ರಲ್ಲಿ ಬಿಜೆಪಿಗೆ 337 ಕೋ.ರೂ. ಮತ್ತು ಕಾಂಗ್ರೆಸ್‌ಗೆ 15 ಕೋ.ರೂ.ಗಳನ್ನು ನೀಡಲಾಗಿತ್ತು.2022-23ರಲ್ಲಿ ಬಿಜೆಪಿಗೆ 256 ಕೋ.ರೂ.ಗಳನ್ನು ನೀಡಿದ್ದರೆ ಕಾಂಗ್ರೆಸ್‌ಗೆ ಪ್ರುಡಂಟ್‌ನಿಂದ ಯಾವುದೇ ಹಣ ಸಂದಾಯವಾಗಿರಲಿಲ್ಲ.

2022-23ರಲ್ಲಿ ಮೇಘಾ ಇಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಲಿ.(87 ಕೋ.ರೂ.),ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈ.ಲಿ.(50 ಕೋ.ರೂ.),ಭಾರ್ತಿ ಏರ್‌ಟೆಲ್ ಲಿ.(10 ಕೋ.ರೂ.),ಮೇಧಾ ಸರ್ವೊ ಡ್ರೈವ್ಸ್ ಪ್ರೈ.ಲಿ.(10 ಕೋ.ರೂ.) ಮತ್ತು ಮೇಧಾ ಟ್ರ್ಯಾಕ್ಷನ್ ಇಕ್ವಿಪ್‌ಮೆಂಟ್ ಪ್ರೈ.ಲಿ.(5 ಕೋ.ರೂ.) ಪ್ರುಡಂಟ್ ಚುನಾವಣಾ ಟ್ರಸ್ಟ್‌ಗೆ ಅತ್ಯಂತ ಹೆಚ್ಚಿನ ದೇಣಿಗೆಗಳನ್ನು ನೀಡಿದ್ದವು. ಬಿಜೆಪಿಯ ನಂತರ ಪ್ರುಡಂಟ್ ತೆಲಂಗಾಣದ ಬಿಆರ್‌ಎಸ್‌ಗೆ 90 ಕೋ.ರೂ. ಮತ್ತು ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್‌ಗೆ 16 ಕೋ.ರೂ.ಗಳನ್ನು ನೀಡಿತ್ತು. ಅಗ್ರ ಐದು ದಾನಿ ಕಂಪನಿಗಳಲ್ಲಿ ನಾಲ್ಕು ಹೈದರಾಬಾದ್ ಮೂಲದ್ದಾಗಿದ್ದವು.

ಹಣವನ್ನು ವಿತರಿಸಲು ಪ್ರುಡಂಟ್ ಚುನಾಣಾ ಟ್ರಸ್ಟ್ ಯಾವ ಸೂತ್ರವನ್ನು ಬಳಸುತ್ತಿದೆ ಮತ್ತು ಚುನಾವಣಾ ಬಾಂಡ್‌ಗಳು ಅಸ್ತಿತ್ವದಲ್ಲಿದ್ದರೂ ಕಂಪನಿಗಳು ಪ್ರುಡಂಟ್‌ಗೆ ದೇಣಿಗೆಗಳನ್ನು ಏಕೆ ಮುಂದುವರಿಸಿವೆ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ದೇಣಿಗೆಗಳಲ್ಲಿ ಹೆಚ್ಚಿನ ಭಾಗ ಬಿಜೆಪಿಯ ಬೊಕ್ಕಸಕ್ಕೆ ಸೇರುತ್ತಿರುವುದು ಈ ಕಂಪನಿಗಳು ಇತರ ರಾಜಕೀಯ ಪಕ್ಷಗಳಿಗಿಂತ ಆಡಳಿತ ಪಕ್ಷಕ್ಕೆ ಹೆಚ್ಚು ಒಲವನ್ನು ತೋರಿಸುತ್ತಿವೆ ಎನ್ನುವುದನ್ನು ಸ್ಪಷ್ಟವಾಗಿಸಿದೆ.

ವಿವಿಧ ಪಕ್ಷಗಳಿಗೆ ಹಣ ಹಂಚಿಕೆಯ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಶ್ನಿಸಿ ನಾವು ಇ-ಮೇಲ್ ಮೂಲಕ ಪ್ರುಡಂಟ್ ಚುನಾವಣಾ ಟ್ರಸ್ಟ್‌ನ್ನು ಸಂಪರ್ಕಿಸಿದ್ದೆವು, ಆದರೆ ಅದರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಪ್ರುಡಂಟ್‌ಗೆ ದೇಣಿಗೆಗಳನ್ನು ನೀಡಿದ್ದ ಹಲವಾರು ಕಂಪನಿಗಳನ್ನೂ ನಾವು ಸಂಪರ್ಕಿಸಿದ್ದೆವು,ಆದರೆ ಅವುಗಳಿಂದಲೂ ಯಾವುದೇ ಉತ್ತರವನ್ನು ನಾವು ಸ್ವೀಕರಿಸಿಲ್ಲ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News